ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯ 12ನೇ ದಿನದ ಯಾತ್ರೆ ಇಂದು ಜಿಲ್ಲೆಯ ಹಿರಿಯೂರು ನಗರದಿಂದ ಆರಂಭವಾಗಿದೆ.
ಹಿರಿಯೂರು ನಗರಕ್ಕೆ ಆಗಮಿಸುತ್ತಿದ್ದಂತೆ ಲಂಬಾಣಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಹಿರಿಯೂರು ನಗರದಲ್ಲಿ ಪಾದಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಹಿರಿಯೂರು ನಗರದ ಟಿ.ಬಿ ಸರ್ಕಲ್ನಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ರಾಹುಲ್ ಗಾಂಧಿ ಆಗಮಿಸಿದ್ದರು. ಭಾರಿ ಜನಸ್ತೋಮ ನೆರೆದ ಹಿನ್ನೆಲೆ ಮಾಲಾರ್ಪಣೆ ಮಾಡದೇ ರಾಹುಲ್ ವಾಪಸ್ ಆಗಿದ್ದಾರೆ.
ಇನ್ನು, ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಜಿಟಿ ಜಿಟಿ ಮಳೆ ಶುರುವಾಯಿತು. ತುಂತುರು ಮಳೆಯ ನಡುವೆಯೂ ಪಾದಯಾತ್ರೆ ಸಾಗುತ್ತಿದೆ. ಇಂದು ಸಂಜೆ ಹಿರಿಯೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಹರ್ತಿಕೋಟೆ ಗ್ರಾಮದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು, ಸಾವಿರಾರು ಮಂದಿ ಕೈ ಕಾರ್ಯಕರ್ತರು, ಮುಖಂಡರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋದಲ್ಲಿ ಮಕ್ಕಳ ದುರ್ಬಳಕೆ ಆರೋಪ.. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸ್ಪಷ್ಟನೆ