ಚಿತ್ರದುರ್ಗ: ಬರಪೀಡಿತ ಮಧ್ಯಕರ್ನಾಟಕದ ಜಿಲ್ಲೆಗಳಿಗೆ ನೀರುಣಿಸುವ 'ಭದ್ರಾ ಮೇಲ್ದಂಡೆ ಯೋಜನೆ' ಈ ಹಿಂದೆ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಯೋಜನೆ ಪೂರ್ಣಗೊಂಡು ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಹಲವು ಭಾಗಗಳಿಗೆ ನೀರು ಹರಿಯಬೇಕಿತ್ತು. ಆದರೆ, ಸಾವಿರಾರು ಕೋಟಿ ಖರ್ಚು ಮಾಡಿದರೂ ಕೂಡ ನೀರು ಮಾತ್ರ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಮಧ್ಯ ಕರ್ನಾಟಕ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಆಶ್ವಾಸನೆ ನೀಡಿದ್ದ ರಾಜ್ಯ ಸರ್ಕಾರ, ಈ ಬಾರಿಯ ವಿಧಾನಮಂಡಲ ಅಧಿವೇಶನದ ವೇಳೆ ಘೋಷಣೆ ಮಾಡುತ್ತಾರೆ ಎಂಬುದು ನೀರಾವರಿ ಹೋರಾಟಗಾರರ ಕನಸಾಗಿತ್ತು. ಆದರೆ, ಇದೀಗ ಎಲ್ಲವೂ ಹುಸಿಯಾಗಿದ್ದು, ಕೇವಲ ಬಾಯಿಮಾತಿಗೆ ರಾಷ್ಟ್ರೀಯ ಯೋಜನೆ ಎಂದು ಜಿಲ್ಲೆಯ ರೈತರನ್ನು ಯಾಮಾರಿಸುವ ಕೆಲಸವನ್ನು ಮಾಡುತ್ತಿದೆ ಎಂದು ರೈತ ಮುಖಂಡರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಪ್ರಮುಖ ಕಾರಣವೊಂದು ಕೇಳಿಬರುತ್ತಿದೆ. ಅದೇನು ಎಂದರೆ, ವೇಗವಾಗಿ ಸಾಗಬೇಕಾದ ಕಾಲುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗಲು ಪ್ರಮುಖ ಕಾರಣ ಈ ಯೋಜನೆಯನ್ನು ನ್ಯಾಷನಲ್ ಪ್ರಾಜೆಕ್ಟ್ ಎಂದು ನಾಮಕೇವಾಸ್ತೆಗೆ ಸರ್ಕಾರ ಘೋಷಣೆ ಮಾಡಿರುವುದು ಎನ್ನಲಾಗುತ್ತಿದೆ.
ರಾಷ್ಟೀಯ ಯೋಜನೆ ಕುರಿತು ಅಧಿಕಾರಿಗಳು ಹೇಳೋದೇನು?
ರಾಷ್ಟೀಯ ಯೋಜನೆ ಹಾಗೂ ಕಾಮಗಾರಿ ಪ್ರಗತಿ ಕುರಿತಾಗಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವ ಅವರನ್ನು ಕೇಳಿದ್ರೆ, ಆಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಾವು ಮಾಧ್ಯಮಗಳ ಮುಂದೆ ಮಾತನಾಡಿದರೆ ಯೋಜನೆಯ ಲಾಭವನ್ನು ಆಂಧ್ರಪ್ರದೇಶದವರು ಪಡೆದುಕೊಳ್ಳುತ್ತಾರೆ. ಜೊತೆಗೆ ರಾಷ್ಟೀಯ ಯೋಜನೆ ಎಂದು ಇದುವರೆಗೂ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆಯಾಗಿಲ್ಲ. ಇತ್ತ ಕೇಂದ್ರ, ನೀರಾವರಿ ಯೋಜನೆಗೆ ನೀಡಬೇಕಾದ ಹಣ ಕೂಡ ಬಂದಿಲ್ಲ ಎಂದರು.
ಒಟ್ಟಿನಲ್ಲಿ ಬೇಸಿಗೆ ಆರಂಭಗೊಳ್ಳುವಷ್ಟರೊಳಗೆ ಭದ್ರಾ ಯೋಜನೆ ಪೂರ್ಣಗೊಂಡು ಜಮೀನಿಗೆ ನೀರು ಹರಿದು, ಉತ್ತಮ ಬೆಳೆ ಬೆಳೆಯುವ ಕಸನು ಹೊತ್ತಿದ್ದ ರೈತರಿಗೆ ನಿರಾಸೆಯುಂಟಾಗಿದೆ. ಜೊತೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ವಿಳಂಬ ಮಾಡುತ್ತಿರುವುದು ಮಧ್ಯ ಕರ್ನಾಟಕದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.