ಚಿತ್ರದುರ್ಗ: ಚಿಪ್ಪು ಹಂದಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಎರಡು ಚಿಪ್ಪು ಹಂದಿಗಳ ಸಮೇತ ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಗುಡ್ಡದ ರಂಗವ್ವನಹಳ್ಳಿ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಗೋಣಿ ಚೀಲದಲ್ಲಿ ಚಿಪ್ಪು ಹಂದಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೂಡ್ಲಿಗಿಯ ವೆಂಕಟೇಶ್, ತಿಪ್ಪೇಸ್ವಾಮಿ ಹಾಗೂ ಮೊಳಕಾಲ್ಮೂರು ತಾಲೂಕಿನ ಪಿಟಿ ಹಟ್ಟಿಯ ನಿವಾಸಿ ಶಂಕರ್ ಎಂದು ಗುರುತಿಸಲಾಗಿದೆ. ಗ್ರಾಮಾಂತರ ಠಾಣೆ ಪಿಎಸ್ಐ ಗಿರೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಎರಡು ಚಿಪ್ಪು ಹಂದಿ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಒಂದು ಚಿಪ್ಪು ಹಂದಿ ಸಾವನ್ನಪ್ಪಿದ್ದರೆ ಮತ್ತೊಂದು ಜೀವಂತವಾಗಿದೆ. ಆರೋಪಿಗಳ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.