ಚಿತ್ರದುರ್ಗ: ರಿಯಲ್ ಎಸ್ಟೇಟ್ ಉದ್ಯಮಿಗೆ ಜಮೀನು ನೀಡದ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಕಾರಿಗೆ ಬೆಂಕಿ ಹಾಕಿ, ಮಾಲೀಕನನ್ನು ಹತ್ಯೆಗೆ ಯತ್ನಿಸಿರುವ ಆರೋಪ ಪ್ರಕರಣ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದ ಬಳಿ ತಡ ರಾತ್ರಿ ನಡೆದಿದೆ.
ಆಂಧ್ರಪ್ರದೇಶದ ಹಿಂದುಪುರ ಮೂಲದ ಸುರೇಶ ಹಾಗೂ ಆತನ ಸಂಗಡಿಗರು ಈ ಕೃತ್ಯ ನಡೆಸಿದ ಆರೋಪ ಕೇಳಿ ಬಂದಿದೆ. ವ್ಯಕ್ತಿಯೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗೆ ಜಮೀನು ಮಾರಾಟ ಮಾಡುವ ವೇಳೆ ಅವರ ಮಗ ವೇಣುಗೋಪಾಲ್ ಎಂಬಾತ ತಗಾದೆ ತೆಗೆದಿದ್ದ. ತಂದೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗ್ತಿದೆ.
ಈ ವಿಚಾರಕ್ಕೆ ಕೋಪಗೊಂಡ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ಹಾಗೂ ಆತನ ತಂಡ ಸರಿಯಾದ ಸಮಯಕ್ಕೆ ಕಾದು ಕುಳಿತಿತ್ತು. ಈ ಸಂದರ್ಭ ಮೊಳಕಾಲ್ಮೂರಿನಿಂದ ಚಳ್ಳಕೆರೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಣುಗೋಪಾಲನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಆತನ ಕೊಲೆಗೆ ಯತ್ನಿಸಿ ಆತನಿಗೆ ಆ್ಯಸಿಡ್ ಹಾಕಿ, ಕಾರಿಗೆ ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಕಾರು ಸುಟ್ಟು ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡ ವೇಣುಗೋಪಾಲನನ್ನು ಬಳ್ಳಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕಾರಿನ ಮೇಲೆ ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.