ಚಿತ್ರದುರ್ಗ : ಅವಾಚ್ಯ ಪದವನ್ನು ಬಳಸಿದ ಕಾರಣಕ್ಕೆ ಸ್ನೇಹಿತನನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ಚಳ್ಳಕೆರೆ ನಗರದ ಕುರುಬರ ಭವನದಲ್ಲಿ ನಡೆದಿದೆ.
ಪಿ ಓಬಳಪುರ ಗ್ರಾಮದ ಅಂಜಿನಿ (27) ಕೊಲೆಗೀಡಾದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೃತ ಅಂಜಿನಿ, ಚಳ್ಳಕೆರೆ ನಗರದಲ್ಲಿ ವಾಸವಾಗಿದ್ದ. ಆತನಿಗೆ ವೃತ್ತಿಯಲ್ಲಿ ಕಳ್ಳರಾದ ಮಂಜುನಾಥ್ ಅಲಿಯಾಸ್ ಕಳ್ಳಮಂಜ (28), ಗಿರೀಶ್ ಅಲಿಯಾಸ್ ಏಡ್ಸ್ ಗಿರಿ (31) ಜೊತೆ ಸ್ನೇಹ ಬೆಳೆದಿತ್ತು. ಜುಲೈ7ರಂದು ಮೂವರು ಸೇರಿ ಕಾಮಗಾರಿ ಸ್ಥಗಿತಗೊಂಡಿದ್ದ ಕುರುಬರ ಭವನದಲ್ಲಿ ಮಟಮಟ ಮಧ್ಯಾಹ್ನವೇ ಮದ್ಯ ಸೇವನೆ ಮಾಡಿದ್ದಾರೆ.
ನಂತರ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಿದೆ. ಅಂಜಿನಿ, ಸ್ನೇಹಿತ ಮಂಜನಿಗೆ ಅವಾಚ್ಯ ಪದ ಬಳಸಿದ್ದಾನೆ. ಪರಿಣಾಮ ಕಳ್ಳ ಮಂಜ ಮತ್ತು ಗಿರಿ ಅಲ್ಲೇ ಇದ್ದ ಇಟ್ಟಿಗೆ ಹಾಗೂ ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲಿಂದ ಕಾಲ್ಕಿತ್ತ ಆರೋಪಿಗಳು ಅಜ್ಞಾತ ಸ್ಥಳದಲ್ಲಿ ವಾಸವಾಗಿದ್ದರು. ಆದರೆ, ಆರೋಪಿ ಮಂಜ ಕೆಲ ಸ್ನೇಹಿತರ ಬಳಿ ಕೊಲೆ ಮಾಡಿರುವ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ವೆಂಕಟೇಶ, ಅಶೋಕ್ ರೆಡ್ಡಿ ಸೇರಿದಂತೆ ತಂಡ ರಚನೆ ಮಾಡಿ ಎಸ್ಪಿ ರಾಧಿಕಾ ಮಾರ್ಗದರ್ಶನದಲ್ಲಿ ಕೊಲೆಗಡುಕರನ್ನು ಹೆಡೆಮುರಿ ಕಟ್ಟಿದ್ದಾರೆ.
ಈ ಹಿಂದೆ ಇವರಿಬ್ಬರೂ ಚಳ್ಳಕೆರೆ ನಗರದಲ್ಲಿ ಗ್ಯಾಸ್, ಮನೆಗಳ್ಳತನ, ಗಾಂಜಾ ಹೀಗೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಓದಿ: ಪ್ರತಿ ದಿನ 5 ಲಕ್ಷದಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪಿಎಂಗೆ ಸಿಎಂ ಮನವಿ