ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವಾಗ ನಾಲ್ವರು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಮಣ್ಣು ಕುಸಿದಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಶೃಂಗೇರಿ ತಾಲೂಕಿನ ನೆಮ್ಮಾರ್‌ನ ಸಾಲುಮರ ಎಸ್ಟೇಟ್ ಸಮೀಪ ಇಂದು ನಡೆಯಿತು.
ಸಾವನ್ನಪ್ಪಿದ ಯುವಕನನ್ನು ನೋಬಿನ್ (23) ಎಂದು ಗುರುತಿಸಲಾಗಿದೆ. ಫೈದುಲ್ ಎಂಬವರ ಕೈಗೆ ಗಾಯವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕೀ ಬುಲ್ ಖಾನ್ ಅವರ ಎರಡೂ ಕಾಲಿಗೆ ಹೆಚ್ಚು ಗಾಯಗಳಾಗಿವೆ. ಮೈಬುಲ್ ಖಾನ್ ಬೆನ್ನಿಗೆ ಪೆಟ್ಟಾಗಿದೆ. ಹೀಗಾಗಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಣ್ಣು ತೆಗೆಯುವಾಗ ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಮಣ್ಣು ದಿಢೀರ್ ಕುಸಿಯಿತು. ತಕ್ಷಣವೇ ಮೂವರು ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು. ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಒಂದು ಗಂಟೆಗಳ ಕಾಲ 3 ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಯಿತು.
ಸ್ಥಳಕ್ಕೆ ಅಗ್ನಿಶಾಮಕ ದಳ, ಶೃಂಗೇರಿ ಪೊಲೀಸರು ಭೇಟಿ ನೀಡಿದರು. ತಡೆಗೋಡೆ ನಿರ್ಮಾಣ ಮಾಡುವ ಜಾಗದಲ್ಲಿ ಜಲ ಉತ್ಪತ್ತಿಯಾಗಿ ಮಣ್ಣು ಸಡಿಲಗೊಂಡಿದೆ. ಆದ್ದರಿಂದ ಮಣ್ಣು ಕುಸಿದಿದೆ ಎಂದು ಹೇಳಲಾಗಿದೆ.
ಮಣ್ಣು ಕುಸಿದ ಜಾಗದ ಮೇಲೆ ನಾಲ್ಕು ಮನೆಗಳಿದ್ದು, ಅವರನ್ನು ತಾತ್ಕಾಲಿಕವಾಗಿ ಬಾಡಿಗೆ ಮನೆಗೆ ರವಾನಿಸಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಅರೆಪಾಲಕ ಇಂಜಿನಿಯರ್ ಮಂಜುನಾಥ್ ಕೆ.ವಿ. ತಿಳಿಸಿದ್ದಾರೆ.
ಅಪಾಯ ನಡೆಯುವ ಮುನ್ಸೂಚನೆಯನ್ನು ಇಂಜಿನಿಯರ್ಗೆ ತಿಳಿಸಿದ್ದೇವೆ. ಸ್ವಲ್ಪ ಗುಡ್ಡ ಈಗಾಗಲೇ ಕುಸಿದಿತ್ತು. ಇಂಜಿನಿಯರ್ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದರು.
ಇದನ್ನೂ ಓದಿ: ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಬಳಿ ಮಣ್ಣು ಕುಸಿದು ಕಾರ್ಮಿಕ ಸಾವು