ಚಿಕ್ಕಮಗಳೂರು : ಒಂಟಿ ಮಹಿಳೆಯನ್ನು ಕತ್ತು ಸೀಳಿ ಕೊಲೆ ಮಾಡಿ ಮನೆಯಲ್ಲಿ ದರೋಡೆ ಮಾಡಿರುವ ಘಟನೆ ಕಡೂರು ತಾಲೂಕಿನ ಲಕ್ಷ್ಮೀಶ ನಗರದಲ್ಲಿ ನಡೆದಿದೆ.
ಕವಿತಾ (31) ಮೃತ ಮಹಿಳೆಯಾಗಿದ್ದು, ಇವರ ಗಂಡ ಕಡೂರು ತಾಲೂಕಿನ ಬೀರೂರು ನಗರದಲ್ಲಿ ದಂತ ವೈದ್ಯರಾಗಿದ್ದಾರೆ. ಪತಿ ಕ್ಲೀನಿಕ್‍ಗೆ ಹೋಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕವಿತಾಳನ್ನು ಸಂಜೆ 7 ಗಂಟೆಯ ಸುಮಾರಿಗೆ ಕೊಲೆ ಮಾಡಲಾಗಿದೆ ಎಂದೂ ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.
ಸಂಜೆ 6.45ಕ್ಕೆ ಆಕೆ ಕೊನೆಯದಾಗಿ ಆಕೆ ಗಂಡನೊಂದಿಗೆ ಮಾತನಾಡಿದ್ದಾಳೆ. 8.15ಕ್ಕೆ ಆಕೆಯ ಹತ್ಯೆ ಸಂಗತಿ ಹೊರ ಬಂದಿದ್ದು, ಕೊಲೆಗೈದವರು ಮನೆಯ ಬೀರೂವಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿವೆ ಎಂದು ತನಿಖೆ ನಿರತ ಪೊಲೀಸರು ತಿಳಿಸಿದ್ದಾರೆ.
ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸುತ್ತಮುತ್ತ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ವಶಪಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಹಿಳೆಯ ಕೊಲೆಯಾಗಿರುವುದರಿಂದ ಸುತ್ತಮುತ್ತಲಿನ ಜನರು ಭಯಗೊಂಡಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.