ಚಿಕ್ಕಮಗಳೂರು: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆಯ ಎಂ.ಐ.ಎಸ್.ಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸತ್ತಿಗನಹಳ್ಳಿ ಗ್ರಾಮದ ಪ್ರಭಾಕರ್ ಗುರುವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಬೈಕ್ನಲ್ಲಿ ಹಿಂದಿರುಗುವಾಗ ಘಟನೆ ನಡೆದಿದೆ. ಪ್ರಭಾಕರ್ ಕೂಡಲೇ ಬೈಕನ್ನು ಅಲ್ಲೇ ಬಿಟ್ಟು ಓಡಿ ಹೋಗಿ ಸಾವಿನಿಂದ ಪಾರಾಗಿದ್ದಾರೆ. ಬೈಕ್ ಜಖಂಗೊಂಡಿದೆ.

ಪ್ರಭಾಕರ್ ಅವರ ಕಾಲು, ತಲೆಗೆ ತೀವ್ರ ಪೆಟ್ಟಾಗಿದೆ. ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅಧಿಕಾರಿಗಳು ಆನೆ ದಾಳಿ ಮಾಡಿದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಮೂಡಿಗೆರೆ ತಾಲೂಕಿನ ಸಾರಗೋಡು, ಊರಬಗೆ, ಕೋಗಿಲೆ, ಜನ್ನಾಪುರ, ಗುತ್ತಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ದಶಕಗಳಿಂದಲೂ ಕಾಡಾನೆ ಸಮಸ್ಯೆ ಇದೆ. ಅರಣ್ಯ ಇಲಾಖೆ ಕೂಡಲೆ ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.