ಚಿಕ್ಕಮಗಳೂರು/ಉಡುಪಿ: ಲೋಕಸಭೆ ಚುನಾವಣೆಯ ದಿನಾಂಕ ಈಗಾಗಲೇ ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಕ್ಷೇತ್ರದಲ್ಲಿ ಗೆಲ್ಲೋಕೆ ರಣತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ಕಾಫಿನಾಡಲ್ಲೂ ಸಹ ಲೋಕಸಭಾ ಕ್ಷೇತ್ರ ಗೆಲ್ಲೋಕೆ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆದಿದೆ.
ಹೌದು, ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಮಲೆನಾಡು ಹಾಗೂ ಕರಾವಳಿಯ ಸೊಬಗನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಮೂರು ಪಕ್ಷಗಳು ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಗೆಲ್ಲೋದಕ್ಕೆ ರಣತಂತ್ರ ರೂಪಿಸುತ್ತಿವೆ. ಇನ್ನು ಮೈತ್ರಿ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ 5ಕ್ಕೂ ಹೆಚ್ಚು ಅಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ಸಿಗುತ್ತೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕಾಂಗ್ರೆಸ್ನಲ್ಲಿ ಪ್ರಮೋದ್ ಮಧ್ವರಾಜ್, ಆರತಿ ಕೃಷ್ಣ, ವಿನಯ್ ಕುಮಾರ್ ಸೊರಕೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಹೆಸರು ಕೇಳಿ ಬರುತ್ತಿವೆ. ಇತ್ತ ಜೆಡಿಎಸ್ನಲ್ಲಿ ಸದ್ಯ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೆಸರು ಕೇಳಿ ಬರುತ್ತಿದೆ. ಆದರೆ ಇವರು ಯಾರೂ ಸಹ ಸಮರ್ಥ ಅಭ್ಯರ್ಥಿ ಅಲ್ಲ ಅಂತಾ ಬಿಜೆಪಿ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ.
ಮಧ್ಯೆ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ನಾನು ಈ ಚುನಾವಣೆಗೆ ಸ್ಪರ್ಧಿಸೋದಿಲ್ಲ, ನಾನು ವಿಧಾನ ಪರಿಷತ್ ಸದಸ್ಯನಾಗಿಯೇ ಇರುತ್ತೇನೆ ಎನ್ನುತ್ತಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಬಿಜೆಪಿ ಶಾಸಕರು ಮತ್ತು ಓರ್ವ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯೂ ನಮ್ಮದೇ ವಿಜಯ ಎಂದು ಬಿಜೆಪಿಯ ಮೂಡಿಗೆರೆ ಶಾಸಕ ಹೇಳುತ್ತಿದ್ದಾರೆ.
ಮತ್ತೊಮ್ಮೆ ಮೋದಿ ಎಂಬಂತೆ ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಿಜೆಪಿಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ದೆ ಅವರಿಗೆ ಟಿಕೆಟ್ ಸಿಗದಿದ್ದರೇ ಅವರು ಜೆಡಿಎಸ್ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 1 ಲಕ್ಷ 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಮೈತ್ರಿ ಪಕ್ಷದಿಂದ ಬಲಿಷ್ಠ ಅಭ್ಯರ್ಥಿಯನ್ನೇ ಶೋಭಾ ವಿರುದ್ದ ಕಣಕ್ಕಿಳಿಯಬೇಕಿದೆ. ಈ ಮಧ್ಯೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ಇಲ್ಲ, ಯಾರೇ ಬಂದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷದಿಂದ ಯಾವ ಅಭ್ಯರ್ಥಿಗೆ ಟಿಕೆಟ್ ಭಾಗ್ಯ ಒಲಿಯಲಿದೆ. ಬಿಜೆಪಿ ಮತ್ತು ಮೈತ್ರಿ ಪಕ್ಷದ ಅಭ್ಯರ್ಥಿಗಳ ಸೆಣೆಸಾಟ ನಡೆದು ಇವರಿಬ್ಬರಲ್ಲಿ ವಿಜಯ ಮಾಲೆ ಯಾರಿಗೆ ಲೆಕ್ಕಾಚಾರದಲ್ಲಿ ಈ ಕ್ಷೇತ್ರದ ಜನರು ತೊಡಗಿದ್ದಾರೆ.