ಚಿಕ್ಕಮಗಳೂರು: ಅಪಘಾತಕ್ಕೀಡಾದ ಚಿರತೆ ರಸ್ತೆ ಮಧ್ಯೆಯೇ ಒದ್ದಾಡಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಾಂಬೂದಿ ಗ್ರಾಮದ ಬಳಿ ನಡೆದಿದೆ.
ರಸ್ತೆ ದಾಟುತ್ತಿದ್ದ ವೇಳೆ ವಾಹನವೊಂದು ಚಿರತೆ ಮೇಲೆ ಹರಿದಿದೆ. ಪರಿಣಾಮ ಕಾಡುಪ್ರಾಣಿ ಗಂಭೀರವಾಗಿ ಗಾಯಗೊಂಡಿತ್ತು. ಅದು ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿಯೇ ನೋವಿನಿಂದ ಒದ್ದಾಡಿದೆ. ಸುಮಾರು ಐದು ವರ್ಷ ಪ್ರಾಯದ ಚಿರತೆಯಾಗಿದ್ದು ಬೀರೂರು - ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯ ಸಂದರ್ಭದಲ್ಲಿ ಸಾರ್ವಜನಿಕರು ಚಿರತೆ ಬಳಿ ಹೋಗಲು ಭಯಪಟ್ಟಿದ್ದು ನಂತರ ಸಹಾಯಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ತರೀಕೆರೆ ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.