ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳು ಉತ್ತಮ ಅಭ್ಯಾಸ ರೂಢಿಸಿಕೊಂಡಿರುವ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ. ರಾಜ್ಯ ಸರ್ಕಾರ 2021ರ ಜನವರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿ ಕಳುಹಿಸಲು ಸೂಚನೆ ನೀಡಿತ್ತು.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಢಶಾಲೆ ಆಯ್ಕೆ ಆಗಿವೆ. ಉತ್ತಮ ಅಭ್ಯಾಸ ಕ್ರಮಗಳು ಮತ್ತು ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಶಾಲೆಗಳ 6 ನಿಮಿಷದ ವಿಡಿಯೋ ಮಾಡಿ ಕಳುಹಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಈ ಎರಡು ಶಾಲೆಗಳು ವಿಡಿಯೋ ಕಳುಹಿಸಿಕೊಟ್ಟಿದ್ದವು.
ಸೊಕ್ಕೆ ಸರಕಾರಿ ಪ್ರೌಢಶಾಲೆ ಹಾಗೂ ಯಲಗುಡಿಗೆ ಶಾಲೆಯ ಶಿಕ್ಷಕರ ಪರಿಶ್ರಮದಿಂದ ಈ ಶಾಲೆಗಳಲ್ಲಿ ಕೌಶಲ್ಯಪೂರ್ಣ ಅಭ್ಯಾಸದ ಜೊತೆಗೆ ಉತ್ತಮ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಶಾಲೆಗಳ ಪಟ್ಟಿಯಲ್ಲಿ ಆಯ್ಕೆಯಾದ ಶಾಲೆಗಳಿಗೆ ಸರ್ಕಾರದಿಂದ 5,000 ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಜಿಲ್ಲೆಯ ಎರಡು ಶಾಲೆಗಳಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಜನತೆ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.