ಚಿಕ್ಕಮಗಳೂರು: ಟ್ರೆಕ್ಕಿಂಗ್ ಹೋಗಿದ್ದ ಪ್ರವಾಸಿಗನೋರ್ವ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕನಾಗಿದ್ದು, ಮೈಸೂರು ಮೂಲದ ಏಳು ಯುವಕರ ತಂಡ ಟ್ರಕ್ಕಿಂಗ್ ತೆರಳಿದ್ದರು. ಕುದುರೆ ಮುಖದಿಂದ-ನೇತ್ರಾವತಿ ಪೀಕ್ಸ್ಪಾಟ್ಗೆ ತೆರಳುತ್ತಿದ್ದರು. ಪೀಕ್ಗೆ ಹೋಗುವ ಮಾರ್ಗದಲ್ಲಿ ರಕ್ಷಿತ್ ಮೃತ ಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಈ ಸ್ಥಳವಿದೆ. ಪೀಕ್ ನಿಂದ ಮೃತ ದೇಹವನ್ನ ಕಳಸ ಪೊಲೀಸರು ತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಡಿಶ್ ರಿಪೇರಿ ವೇಳೆ ಕೆಳ ಬಿದ್ದು ವ್ಯಕ್ತಿ ಸಾವು ಬಂಟ್ವಾಳ: ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಆಯತಪ್ಪಿ ಮಹಡಿ ಮೇಲಿನಿಂದ ಕೆಳ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಆಚಾರಿಪಲ್ಕೆ ನಿವಾಸಿ ಯತೀಶ್ (32) ಮೃತ ವ್ಯಕ್ತಿ. ಯತೀಶ್ ಅವರು ಕೈಕಂಬದ ಹೋಲಿ ಫ್ಯಾಮಿಲಿ ವಸತಿ ನಿಲಯದ ಮನೆಯೊಂದರ ಡಿಶ್ ರಿಪೇರಿ ಮಾಡುತ್ತಿದ್ದರು. ಈ ವೇಳೆ ಆಯತಪ್ಪಿ ಮೂರು ಅಂತಸ್ತಿನ ಮಹಡಿಯಿಂದ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.
ಘಟನೆ ನಡೆದ ತಕ್ಷಣ ಮಿಲಾದುನ್ನಭಿ ಸಂಘದ ನುಸ್ರತ್ ಅಂಬ್ಯುಲೆನ್ಸ್ ಮೂಲಕ, ಕೂಡಲೇ ಸಮಾದ್ ಎಂಬುವವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದರು. ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಯತೀಶ್ ಸಾವನ್ನಪ್ಪಿದ್ದಾರೆ.
ಶಟಲ್ ಆಡುವ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು.. ತೆಲಂಗಾಣದ ಜಗಿತ್ಯಾಲ ಎಂಬಲ್ಲಿ 53 ವರ್ಷದ ಬುಸಾ ರಾಜವೆಂಕಟ ಗಂಗಾರಾಮ್ ಎಂಬುವವರು ಶಟಲ್ ಆಡುವಾಗ ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಸ್ನೇಹಿತರೊಟ್ಟಿಗೆ ಶಟಲ್ ಆಡುತ್ತಿದ್ದ ವೇಳೆ ಗಂಗಾರಾಮ್ ಕುಸಿದು ಬಿದ್ದಿದ್ದರು. ಈ ವೇಳೆ ಸ್ನೇಹಿತರು, ತುರ್ತಾಗಿ ಪ್ರಥಮ ಚಿಕಿತ್ಸೆ ಮಾಡಿದರೂ ಗಂಗಾರಾಮ್ ಬದುಕುಳಿಯಲಿಲ್ಲ. ಈ ಹಿಂದೆ ರಾಜವೆಂಕಟ ಗಂಗಾರಾಮ್ ಅವರಿಗೆ ಒಮ್ಮೆ ಹೃದಯಾಘಾತವಾಗಿ ಸ್ಟೆಂಟ್ ಅಳವಡಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದರು. ಬುಸಾ ರಾಜವೆಂಕಟ ಗಂಗಾರಾಮ್ ಗಾರ್ಮೆಂಟ್ಸ್ ಅಂಗಡಿ ವ್ಯಾಪಾರಿ ಎಂದು ತಿಳಿದು ಬಂದಿತ್ತು.
ಯೋಗಾಭ್ಯಾಸದ ವೇಳೆ ಹೃದಯಾಘಾತ ಸಂಭವಿಸಿ ವ್ಯಕ್ತಿ ಸಾವು.. ಗುಜರಾತ್ ಸೂರತ್ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಯೋಗ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹಠಾತ್ ಆಗಿ ಸಾವನ್ನಪ್ಪಿದ್ದರು. 44 ವರ್ಷದ ಮುಖೇಶ್ ಎನ್ನುವವರು ಎಂದಿನಂತೆ ಯೋಗಾಭ್ಯಾಸಕ್ಕೆ ತೆರಳಿದ್ದರು. ಈ ವೇಳೆ ಅಸಿಡಿಟಿ ಕಾಣಿಸಕೊಂಡಿತ್ತು. ಬಳಿಕ ಏಕಾಏಕಿ ಕುಸಿದು ಬಿದ್ದಿದ್ದರು. ಸ್ಥಳದಲ್ಲಿದ್ದ ಕೆಲವರು ಕೂಡಲೇ ಮುಖೇಶ್ರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ