ಚಿಕ್ಕಮಗಳೂರು : 2023ಕ್ಕೆ ಗುಡ್ ಬೈ ಹೇಳುವ ಕಾಲ ಸನ್ನಿಹಿತವಾಗುತ್ತಿದೆ. ವರ್ಷಾಂತ್ಯವನ್ನು ಕಲರ್ಫುಲ್ ಆಗಿ ಸೆಲೆಬ್ರೇಟ್ ಮಾಡಬೇಕು, 2024ನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು ಅಂತ ಎಲ್ಲರೂ ಕಾತರದಿಂದಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಕಾಫಿನಾಡಿನಲ್ಲಿ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿವೆ.
ಚಿಕ್ಕಮಗಳೂರಲ್ಲಿ ಎಲ್ಲಿ ನೋಡಿದರೂ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಇಯರ್ ಎಂಡ್ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯಲ್ಲಿ ಜನಸಾಗರವೇ ಸೇರುತ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಬ್ಯುಸಿ ಆಗಿವೆ. ಬಹುತೇಕರು ಇಲ್ಲಿಗೆ ಬಂದು ಇಯರ್ಎಂಡ್, ನ್ಯೂ ಇಯರ್ ಆಚರಣೆ ಹಾಗೂ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ.
10-15 ದಿನಗಳ ಹಿಂದೆ ಹಾಗೂ ಇನ್ನೂ ಕೆಲವರು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದ್ದಾರೆ. ಕಾಫಿನಾಡಲ್ಲಿರುವ ಸುಮಾರು 1400 ಕ್ಕೂ ಅಧಿಕ ಹೋಂ ಸ್ಟೇ ಹಾಗೂ 200 ಕ್ಕೂ ಹೆಚ್ಚು ರೆಸಾರ್ಟ್‍ಗಳು ಬಹುತೇಕ ಬುಕ್ ಆಗಿವೆ. ಡಿಸೆಂಬರ್ ತಿಂಗಳಲ್ಲಿ ಕಾಫಿನಾಡಿಗೆ 11 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ, ಡಿಸೆಂಬರ್ 30-31 ಹಾಗೂ ಜನವರಿ 1ರ ಮೂರೇ ದಿನದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಬರಲಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಲೋಕೇಶ್, "ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ದ ಮಾಲಿನ್ಯದಲ್ಲಿ ಕಳೆದುಹೋಗಿದ್ದ ಪ್ರವಾಸಿಗರಿಗೆ ಭೂ ಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡುವುದು ಗ್ಯಾರಂಟಿ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ವಿಸ್ಮಯ ಕಂಡು ಪ್ರವಾಸಿಗರು ಮೈಮರೆಯುತ್ತಿದ್ದಾರೆ. ಜಿಲ್ಲೆಯ ಬಹುತೇಕ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ಗಳು ಭರ್ತಿಯಾಗಿವೆ. ಕೆಲವೆಡೆ ಬುಕ್ಕಿಂಗ್ ರದ್ದಾದರೆ ಮಾತ್ರ ರೂಂ ಸಿಗಲಿದೆ ಎಂಬಂತಾಗಿದೆ. ಇನ್ನೊಂದೆಡೆ, ಹೋಂ ಸ್ಟೇ, ರೆಸಾರ್ಟ್ ಮಾಲೀಕರು ಕೂಡ ಬಗೆ ಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆ ಈಡೇರಿಸಲು ಸನ್ನದ್ಧರಾಗಿದ್ದಾರೆ" ಎಂದರು.
ಇದನ್ನೂ ಓದಿ : ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ - ವಿಡಿಯೋ
ಒಟ್ಟಾರೆ, ಕಳೆದ ವರ್ಷ ಕೋವಿಡ್ ಆತಂಕವಿಲ್ಲದೆ ನಿರಾತಂಕವಾಗಿ ವರ್ಷಾಂತ್ಯ ಆಚರಣೆ ಮಾಡಿದ್ದ ಜನರು, ಈ ವರ್ಷ ಮತ್ತೆ ವೈರಸ್ ಭಯದ ನೆರಳಲ್ಲೇ ಹೊಸ ವರ್ಷಕ್ಕೆ ಸ್ವಾಗತ ಹೇಳಬೇಕಾದ ಸ್ಥಿತಿ ಇದೆ. ಕೋವಿಡ್ ಭಯದ ಮಧ್ಯೆಯೂ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.