ಚಿಕ್ಕಮಗಳೂರು: ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಲ್ಲದ ದಿನವಿಲ್ಲ. ಹೀಗಾಗಿ ಕಾಫಿನಾಡಿನ ಸ್ವರ್ಗ ಎಂದು ಪ್ರಸಿದ್ಧಿ ಪಡೆದಿದೆ. ಆದ್ರೆ ಇಂದು ಇಲ್ಲಿನ ಸೌಂದರ್ಯವನ್ನು ಸವಿಯಲು ಬಂದ ಪ್ರವಾಸಿಗರು ಸಂಭ್ರಮ, ಸಡಗರದ ಮಧ್ಯೆ ಸಾಕಷ್ಟು ಕಿರಿಕಿರಿ ಅನುಭವಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಮ್ ಸ್ಟೇ, ರೆಸಾರ್ಟ್ಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಮುಳ್ಳಯ್ಯನಗಿರಿಗೆ ಆಗಮಿಸಿದ್ದರು. ಪ್ರಕೃತಿಯ ಮಡಿಲಲ್ಲಿ ಸ್ವಚ್ಛವಾದ ಗಾಳಿಯ ನಡುವೆ ವಿಹರಿಸುತ್ತಾ ಪ್ರವಾಸಿಗರು ಹೊಸವರ್ಷವನ್ನು ಬರ ಮಾಡಿಕೊಂಡರು. ಹಾಗಾಗಿ ಮುಳ್ಳಯ್ಯನಗಿರಿಯ ಬೆಟ್ಟದಲ್ಲಿ ಪ್ರವಾಸಿಗರ ಜಾತ್ರೆ ಏರ್ಪಟ್ಟಿತ್ತು. ಕಣ್ಣು ಹಾಯಿಸಿದ ಕಡೆಯಲೆಲ್ಲಾ ಜನರೇ ಕಾಣುತ್ತಿದ್ದರು.
ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಒಂದೆಡೆಯಾದರೆ, ಕಿರಿದಾದ ರಸ್ತೆ ಮೂಲಕವೇ ಮುಳ್ಳಯ್ಯನಗಿರಿಗೆ ಸಾಗಬೇಕು. ಹೀಗಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಂದೆಯೂ ಹೋಗಲಾಗದೆ, ಹಿಂದೆಯೂ ಬರಲಾರದೆ ಗಂಟೆಗಟ್ಟಲೇ ಕಾರು, ಜೀಪ್, ಬೈಕ್ಗಳು ದಾರಿಯುದ್ದಕ್ಕೂ ತಟಸ್ಥವಾಗಿ ನಿಂತಿದ್ದವು. ವಾಹನ ದಟ್ಟಣೆಯಿಂದ ಪ್ರವಾಸಿಗರು ಅಕ್ಷರಶಃ ಹೈರಾಣಾದರು. ಒಂದೆಡೆ ಮುಳ್ಳಯ್ಯನಗಿರಿ ಸೌಂದರ್ಯ ಸವಿದ ಖುಷಿಯಾದ್ರೆ, ಇನ್ನೊಂದೆಡೆ ಪ್ರವಾಸಿಗರಿಗೆ ಟ್ರಾಫಿಕ್ ಕಿರಿಕಿರಿಯಿಂದ ಸಾಕು ಸಾಕೆನಿಸಿತು.
ಇದನ್ನೂ ಓದಿ: ನಾಗಮಂಗಲದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ