ಚಿಕ್ಕಮಗಳೂರು: ಅಜ್ಜಂಪುರದ ಉಬ್ರಾಣಿ ಏತ ನೀರಾವರಿ ಮೂಲಕ ಭದ್ರಾ ನೀರು ಪೂರೈಸುವ ತಾಲೂಕಿನ 87 ಕೆರೆಗಳ ಪಟ್ಟಿಯಿಂದ ನಂದೀಪುರ ಗ್ರಾಮದ ಕೆರೆಯ ಹೆಸರನ್ನು ಕೈ ಬಿಡಲಾಗಿದೆ. ಹಾಗಾಗಿ ಸರ್ಕಾರದ ಈ ನಡೆಯನ್ನು ಖಂಡಿಸಿ ಗ್ರಾಮಸ್ಥರು ಈ ಬಾರಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ನಂದೀಪುರ ಹಾಗೂ ಬೀರನಹಳ್ಳಿ ಗ್ರಾಮಸ್ಥರು ಈ ಬಾರೀಯ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ನಂದೀಪುರದಲ್ಲಿ 250 ಕ್ಕೂ ಹೆಚ್ಚು ಕುಟುಂಬಗಳಿದ್ದು, ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವಾಗ ತಾಲೂಕಿನ ಬಹುತೇಕ ಎಲ್ಲಾ ಕೆರೆ ತುಂಬಿಸಲು ಒಪ್ಪಿಗೆ ನೀಡಲಾಗಿತ್ತು.
ಆದ್ರೆ ನಂದಿಪುರದ ಕೆರೆಯನ್ನು ಕೈ ಬಿಟ್ಟಿದ್ದರಿಂದ ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ನಂದಿಪುರ ಗ್ರಾಮದ ಕೆರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ, ಅಜ್ಜಂಪುರದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.