ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯಲ್ಲಿ ಪೋಕ್ಸೋ ಕೇಸ್ ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಕ್ಕೆ ಓರ್ವ ಎಎಸ್ಐ ಸೇರಿದಂತೆ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಕ್ಕೆ ಅಂದು ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ಪದ್ಮಾಕ್ಷ, ಪೊಲೀಸ್ ಕಾನ್ಸ್ಟೇಬಲ್ಗಳಾದ ಬಸಂತ್ ಕುಮಾರ್, ರಘುವೀರ್ ಹಾಗೂ ಸಂತೋಷ್ ಎಂಬುವವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅಮಾನತುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಳೆಹೊನ್ನೂರು ಸಮೀಪದ ಹಳ್ಳಿಯೊಂದರಲ್ಲಿ ನಿಜಾಮ್ ಎಂಬಾತ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನೆಂಬ ಆರೋಪವಿತ್ತು. ಬಾಲಕಿ ಶನಿವಾರ ತನ್ನ ಮನೆ ಸಮೀಪದ ಅಂಗಡಿಯಿಂದ ಬರುವಾಗ ಆರೋಪಿ ಗೂಡ್ಸ್ ವಾಹನದಲ್ಲಿ ಬಂದು ಬಾಲಕಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದನು. ಬಾಲಕಿ ನಿರಾಕರಿಸಿದಾಗ ಆತ ಆಕೆಯನ್ನ ವಾಹನದೊಳಗೆ ಎಳೆದುಕೊಂಡು ಹೋಗಿದ್ದನು. ಗ್ರಾಮದಿಂದ ಸುಮಾರು ಐದಾರು ಕಿ.ಮೀ. ದೂರದ ಅರಣ್ಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದನೆಂದು ಆರೋಪಿಸಲಾಗಿದೆ.
ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಪುನಃ ಕರೆತಂದು ಗ್ರಾಮಕ್ಕೆ ಬಿಟ್ಟು ಹೋಗುವಾಗ ಸ್ಥಳೀಯರು ವಿಚಾರಿಸಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಶನಿವಾರ ಬಾಳೆಹೊನ್ನೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಆದರೆ, ಆತ ಭಾನುವಾರ ಮಧ್ಯಾಹ್ನ ಠಾಣೆಯಿಂದಲೇ ಎಸ್ಕೇಪ್ ಆಗಿದ್ದನು.
ಬಳಿಕ ಆತನನ್ನ 40 ಕಿ.ಮೀ. ದೂರದ ಬಾಳೆಹೊನ್ನೂರಿನಲ್ಲಿ ಬಂಧಿಸಿದ್ದರು. ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿರುವುದು ಇಲಾಖೆಗೆ ಮುಜುಗರ ತಂದಿತ್ತು. ಹಾಗಾಗಿ ಎಸ್ಪಿ ಅಕ್ಷಯ್, ಕರ್ತವ್ಯ ಲೋಪದ ಹಿನ್ನೆಲೆ ಓರ್ವ ಎಎಸ್ಐ ಸೇರಿದಂತೆ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳ ನ್ನ ಅಮಾನತು ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.