ಚಿಕ್ಕಮಗಳೂರು : ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ನಿನ್ನೆಯಿಂದ ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ ಬೀಡು ಬಿಟ್ಟಿದೆ.
ನಿನ್ನೆ ಸಂಜೆ ಕಮ್ಮರಡಿ ಬಳಿಯ ಉಮಾಮಹೇಶ್ವರ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಮವಾಸ್ಯೆ ನಿಮಿತ್ತ ಸಕಲ ಇಷ್ಠಾರ್ಥಗಳು ಈಡೇರಲಿದೆ ಎನ್ನುವ ನಂಬಿಕೆಯೊಂದಿಗೆ ಶಿವನಿಗೆ ವಿಶೇಷ ಪೂಜೆ ಹಾಗೂ ಯಾಗವನ್ನು ನಡೆಸಿದರು.
ಇಂದು ಸಹ ಇಲ್ಲಿಯೇ ಬೀಡುಬಿಟ್ಟಿದ್ದು ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಳೆದ ಐದು ದಿನಗಳಿಂದ ಉಡುಪಿಯಲ್ಲಿಯೇ ಪ್ರಕೃತಿ ಚಿಕಿತ್ಸೆಯಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಉಡುಪಿಯಿಂದ ನೇರವಾಗಿ ಕೊಪ್ಪದಲ್ಲಿರುವ ಉಮಾಮಹೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ನದಿಯಲ್ಲೇ ಸ್ನಾನ ಮಾಡಿ ಸಂಕಲ್ಪ ಮಾಡಬೇಕೆಂಬ ನಿಯಮವಿರುವ ಹಿನ್ನೆಲೆ ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಇನ್ನು ಪುಣ್ಯ ಸ್ನಾನದ ದೃಶ್ಯ ಮಾಧ್ಯಮವರಿಗೆ ಗೊತ್ತಾಗಬಾರದು ಎಂಬ ಕಾರಣದಿಂದ ಪೊಲೀಸರು ಸಂಪೂರ್ಣವಾಗಿ ಶಾಮಿಯಾನ ಹಾಕಿದ್ದರು. ಸಿಎಂ ಆಗಮನದ ಹಿನ್ನೆಲೆ ಉಮಾ ಮಹೇಶ್ವರ ದೇವಾಲಯಕ್ಕೆ ಬರುವ ಸಾರ್ವಜನಿಕರು ಸೇರಿದಂತೆ ಪೊಲೀಸರಿಗೂ ಪ್ರವೇಶ ನಿಷೇಧ ಹೇರಲಾಗಿತ್ತು. ಅಲ್ಲದೆ ದೇವಸ್ಥಾನಕ್ಕೆ 100 ಅಡಿ ಅಂತರದಲ್ಲೇ ಪೊಲೀಸ್ ಸರ್ಪಗಾವಲು ಹಾಕಿ ಬಿಗಿ ಭದ್ರತೆ ಕಲ್ಪಿಸಿ ಮಾಧ್ಯಮ ಚಿತ್ತೀಕರಣಕ್ಕೂ ನಿಷೇಧ ಹಾಕಲಾಗಿತ್ತು.
ಪುಣ್ಯ ಸ್ನಾನದ ನಂತರ ರುದ್ರ ಹೋಮ, ಗಣಪತಿ ಹೋಮ, ಉಮಾಮಹೇಶ್ವರ ಯಾಗದ ಸಂಕಲ್ಪವನ್ನು ದೇವೇಗೌಡರ ಕುಟುಂಬ ನೆರೆವೇರಿಸಿತು. ಸರಿಸುಮಾರು ಸಂಜೆ 5 ಗಂಟೆಯಿಂದ ರಾತ್ರಿ 10.30 ರ ವರೆಗೂ ಉಮಾಮಹೇಶ್ವರ ದೇವಾಲಯದಲ್ಲಿ ಇಡೀ ಕುಟುಂಬ ಪೂಜೆಯಲ್ಲಿ ಭಾಗಿಯಾಗಿತ್ತು. ಇನ್ನು ಇಂದು ಅಮವಾಸ್ಯೆಯಾಗಿದ್ದರಿಂದ ದೇವಾಲಯದಲ್ಲಿ ಯಾಗ ಪೂರ್ಣಾಹುತಿ ನಡೆಯಲಿದೆ ಎನ್ನಲಾಗುತ್ತಿದೆ. ಇನ್ನು ಪೂಜೆಯಿಂದ ಹೊರಬಂದ ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ, ದೇವೇಗೌಡರಿಗೆ ಗ್ರಹಚಾರದಲ್ಲಿ ದೋಷವಿರುವ ಹಿನ್ನೆಲೆ ಹಾಗೂ ಆರೋಗ್ಯ ವೃದ್ಧಿಗಾಗಿ ಯಾಗ ನಡೆಯುತ್ತಿದೆ ಎಂದು ಹೇಳಿದರು.