ಚಿಕ್ಕಮಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡದ ಭೀತಿ ಸೃಷ್ಟಿಯಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಕೋವಿಡ್ಗೆ ಯಾರೂ ಭಯ ಪಡಬೇಕಿಲ್ಲ. ಕೊರೊನಾ ವೈರಸ್ ಬಂದಾಗ ಪ್ರೀತಿ ಇರಲಿ, ಯಾವುದೇ ರೀತಿಯ ಭೀತಿ ಬೇಡ. ಕೊರೊನಾ ವೈರಸ್ನಿಂದ ಸಾವನ್ನಪ್ಪಿದವರ ಮೃತದೇಹಗಳಿಗೆ ಗೌರವಯುತ ಅಂತ್ಯ ಸಂಸ್ಕಾರ ಮಾಡದಂತಹ ಭೀತಿ ಸೃಷ್ಟಿಯಾಗಿದೆ. ಆದರೆ ಮೃತದೇಹವನ್ನು ಮುಟ್ಟಿದವರು ಮೂಗು, ಕಣ್ಣು, ಬಾಯಿ ಮುಟ್ಟಿಕೊಂಡರೆ ಕೊರೊನಾ ಸೋಂಕು ತಗುಲಬಹುದು. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಅಂತ್ಯ ಸಂಸ್ಕಾರ ಮಾಡಿದರೆ ಸೋಂಕಿನಿಂದ ಪಾರಾಗಬಹುದು. ಸತ್ತವರಿಗೆ ಗೌರವಯುತ ಅಂತ್ಯ ಸಂಸ್ಕಾರ ಮಾಡಲು ಯಾವುದೇ ರೀತಿಯ ಭಯದ ಅವಶ್ಯಕತೆ ಇಲ್ಲ ಎಂದರು.
ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡಲು ನಾವು ಒಂದು ತಂಡವನ್ನು ಜಿಲ್ಲೆಯಲ್ಲಿ ರಚನೆ ಮಾಡುತ್ತೇವೆ. ಆ ತಂಡದ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಅಂತ್ಯ ಸಂಸ್ಕಾರ ಮಾಡುವವರಿಗೆ ತೊಂದರೆಯಾದರೆ ನಾವೇ ಮುಂದೆ ನಿಂತು ಅವರವರ ನಂಬಿಕೆಯ ಪ್ರಕಾರ ಅಂತ್ಯ ಸಂಸ್ಕಾರವನ್ನು ಮಾಡುತ್ತೇವೆ ಎಂದು ತಿಳಿಸಿದರು.