ಚಿಕ್ಕಮಗಳೂರು: ಮಲೆನಾಡು-ಕರಾವಳಿ ಭಾಗದ ಖ್ಯಾತ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಇನ್ನಿಲ್ಲ. ಮೊನ್ನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಅವರು, ಜಾಗತಿಕ ವ್ಯವಹಾರ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಈ ಚತುರ ವಾಣಿಜ್ಯ ಲೋಕದಲ್ಲಿ ಬೆಳೆದಿದ್ದು, ಅವರ ಏಳು ಬೀಳುಗಳ ಕುರಿತ ಕಿರು ಪರಿಚಯ ಇಲ್ಲಿದೆ.
ಕಾಫಿನಾಡಲ್ಲಿ ಜನನ:
ಕಾಫಿ ಕಿಂಗ್ ಎಂಬ ಖ್ಯಾತಿ ಪಡೆದಿರುವ ಸಿದ್ಧಾರ್ಥ್ ಹೆಗ್ಡೆ, ಮಲೆನಾಡಿನ ಶಂಕರಕುಡಿಗೆಯ ತನೂಡಿ ಕುಟುಂಬ ವರ್ಗದ ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ಹೆಗ್ಡೆ ದಂಪತಿಯ ಏಕೈಕ ಪುತ್ರ. ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಜನಿಸಿದ್ದ ಇವರು, ಪ್ರಾಥಮಿಕ ಶಿಕ್ಷಣವನ್ನು ಮೂಡಿಗೆರೆಯಲ್ಲಿಯೇ ಮುಗಿಸಿದ್ದರು. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು.
ಸೈನ್ಯಕ್ಕೆ ಸೇರಬಯಸಿದ್ದ ಸಿದ್ಧಾರ್ಥ್
ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆಯಿಂದ ಸಿದ್ಧಾರ್ಥ್, ತಮ್ಮ ಕಾಲೇಜು ದಿನಗಳಲ್ಲಿ ಎನ್ಸಿಸಿ ಕೆಡೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಕಾಲೇಜು ವಿದ್ಯಾಭ್ಯಾಸದ ನಂತರ ಮುಂಬೈಗೆ ಹೋಗಿ 2 ವರ್ಷ ಫೈನಾನ್ಸ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸಿ, ಷೇರು ಕಂಪನಿಗಳ ಒಳ ಮರ್ಮಗಳನ್ನು ತಿಳಿದುಕೊಂಡಿದ್ದರು. ಬಳಿಕ ಬೆಂಗಳೂರಿಗೆ ಬಂದು ಕಂಪನಿ ಆರಂಭಿಸಿದರು. ಇದೇ ಸಂದರ್ಭದಲ್ಲಿ ರಾಜಕೀಯವಾಗಿ ಪ್ರವರ್ಧಮಾನದಲ್ಲಿದ್ದ ಎಸ್. ಎಂ. ಕೃಷ್ಣ ಮತ್ತು ಪ್ರೇಮಕೃಷ್ಣ ದಂಪತಿಯ ಮಗಳು ಮಾಳವಿಕರನ್ನು ವರಿಸಿದರು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಅವರಿಗೆ ಅಮರ್ತ್ಯ ಮತ್ತು ಇಶಾನ್ ಎಂಬ ಇಬ್ಬರು ಪುತ್ರರಿದ್ದಾರೆ. ಪ್ರಸ್ತುತ ಇಬ್ಬರು ಪುತ್ರರು ನ್ಯೂಯಾರ್ಕ್ ಹಾಗೂ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಿದ್ಧಾರ್ಥ್ಗೆ ಚಿಕ್ಕಮಗಳೂರು, ಮೂಡಿಗೆರೆ, ಚೀಕನಹಳ್ಳಿ, ಬಣಕಲ್, ಚಂದ್ರಾಪುರ, ಗೋಣಿಬೀಡು ಸೇರಿದಂತೆ ನಾನಾ ಭಾಗದಲ್ಲಿ ಸುಮಾರು 13 ಸಾವಿರ ಎಕರೆ ಕಾಫಿ ತೋಟವಿದೆ. ಅಲ್ಲದೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿ ಅವರ ಬಾಳಿಗೆ ಬೆಳಕಾಗಿದ್ದವರು.
ಲಕ್ಷಾಂತರ ಮಂದಿಗೆ ಬದುಕು ಕೊಟ್ಟರು...
ಕಾಫಿ ಉದ್ಯಮ ಮುಕ್ತ ಮಾರುಕಟ್ಟೆಗೆ ಬಂದಂತಹ ಸಂದರ್ಭದಲ್ಲಿ, ಹಾಸನದಲ್ಲಿ ಕಾಫಿ ಕ್ಯೂರಿಂಗ್‌ನ ಪಾರ್ಟ್ನರ್ ಆಗಿ, ನಂತರ ಕಾಫಿ ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಸಿಗಲು ಕಾರಣರಾಗಿದ್ದಾರೆ. ದೇಶ-ವಿದೇಶ ಸೇರಿದಂತೆ 1500 ಕ್ಕೂ ಹೆಚ್ಚು ಕಾಫಿ ಶಾಪ್ಗಳನ್ನು ತೆರೆದು, ಚಿಕ್ಕಮಗಳೂರಿನ ಕಾಫಿಯನ್ನು ವಿಶ್ವ ವಿಖ್ಯಾತಿ ಪಡಿಸಿದ್ದಾರೆ. ಅಲ್ಲದೆ ವಿಶ್ವದಾದ್ಯಂತ ಸುಮಾರು 40 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಇಂದು ಇವರನ್ನೇ ನಂಬಿಕೊಂಡು ಲಕ್ಷಾಂತರ ಮಂದಿ ಬದುಕು ಸಾಗಿಸುತ್ತಿದ್ದಾರೆ.
ಕಾಫಿನಾಡಿನಲ್ಲಿ ಕಾರ್ರೇಸ್!
ಮಲೆನಾಡು ಭಾಗದಲ್ಲಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೇನಾದರೂ ನಡೆದರೆ, ಅದರ ಪ್ರಾಯೋಜಕತ್ವ ಪಡೆದುಕೊಳ್ಳುತ್ತಿದ್ದುದು ಇನ್ನೊಂದು ವಿಶೇಷ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮೋಟಾರು ಕಾರು ರ‍್ಯಾಲಿಯನ್ನು ತಮ್ಮದೇ ಅಂಬರ್ ವ್ಯಾಲಿ ಮತ್ತು ಚೇತನಹಳ್ಳಿ ಕಾಫಿ ತೋಟದಲ್ಲಿ ನಡೆಸಿ ಮಲೆನಾಡನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕಾರ್ ರೈಡರ್ಗಳಾದ ಗೌರವ್ ಸಿಲ್ ಸೇರಿದಂತೆ ಹತ್ತು ಹಲವು ರೈಡರ್ಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಬರುವಂತೆ ಮಾಡಿದ ಕೀರ್ತಿ ಸಿದ್ಧಾರ್ಥ್ ಅವರಿಗೆ ಸಲ್ಲುತ್ತದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಳ್ಳಿಯ ಬಡ ಹುಡುಗರು ಮತ್ತು ಕನ್ನಡಿಗರು ಇಂಗ್ಲಿಷ್ ಕಲಿತು ಕಂಪನಿಗಳಲ್ಲಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಬಡತನದಲ್ಲಿ ನರಳುವ ಈ ಕುಟುಂಬಗಳು ಮುಂದಿನ ಪೀಳಿಗೆಯಲ್ಲಿಯಾದರೂ ಮುನ್ನೆಲೆಗೆ ಬರಬೇಕು ಎಂಬುದು ಸಿದ್ಧಾರ್ಥ್ ಅವರ ದೊಡ್ಡ ಕನಸು. ಈ ಕಾರಣದಿಂದ ಚಿಕ್ಕಮಗಳೂರಿನಲ್ಲಿ ಯುವ ಎಜುಕೇಷನ್ ಸೊಸೈಟಿ ತೆರೆಯುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಿ, ದೇಶದ ವಿವಿಧ ಮೂಲೆಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸುವಂತೆ ಮಾಡಿದ್ದಾರೆ.
ಬಡವರಿಗಾಗಿ ಉಚಿತ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ...
ಚಿಕ್ಕಮಗಳೂರು ಹೊರ ವಲಯದಲ್ಲಿರುವ ಆದಿಶಕ್ತಿ ನಗರದಲ್ಲಿ ತಂದೆ ಗಂಗಯ್ಯ ಹೆಗ್ಡೆ ಹೆಸರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಿದ್ದಾರೆ. ಇಲ್ಲಿನ ಸ್ಥಳೀಯರಿಗೆ ಹಾಗೂ ಜಿಲ್ಲೆಯ ಕಾಫಿ ತೋಟದಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೆ ಉಚಿತ ಅರೋಗ್ಯ ಸೇವೆ ನೀಡಬೇಕು. ಉಚಿತವಾಗಿ ಔಷಧಿ ನೀಡಬೇಕು. ಈ ಆಸ್ಪತ್ರೆಯಲ್ಲಿ ಬಿಲ್ ಕೌಂಟರ್ ಇರಬಾರದು. ಉಚಿತವಾಗಿಯೇ ಬಡವರಿಗೆ ಆರೋಗ್ಯ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯನ್ನೂ ನಡೆಸುತ್ತಿದ್ದರು.
ಅಪ್ಪ ಕೊಟ್ಟ ದುಡ್ಡಲ್ಲಿ ಉದ್ಯಮ, 22 ಸಾವಿರ ಕೋಟಿ ರೂ.ಗಳ ಒಡೆಯನಾದ...
ಕಾಫಿ ಡೇ ಕಂಪನಿಯನ್ನು ವಿದೇಶಿ ಬ್ರ್ಯಾಂಡ್ ಮಾಡಿದ್ದು, ಹತ್ತಾರು ದೇಶಗಳಲ್ಲಿ ಮನೆ ಮಾತಾಗುವಂತೆ ಮಾಡಿ, ಯಾವುದೇ ರೀತಿಯ ದುಂದು ವೆಚ್ಚ ಮತ್ತು ಅಡಂಬರ ಮಾಡದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವನ ಸಾಗಿಸಿದ್ದರು. ಕಾಫಿ ಡೇ ಮಾಲೀಕ ಸಿದ್ಧಾರ್ಥ್, ಅಂದು ತಂದೆ ಕೊಟ್ಟಿದ್ದ ಅಲ್ಪ ದುಡ್ಡಲ್ಲೇ 22 ಸಾವಿರ ಕೋಟಿ ರೂ.ಗಳ ಮೌಲ್ಯದ ಆಸ್ತಿಯ ಒಡೆಯನಾಗಿ ಬೆಳೆದರು.
ಮೊದಲು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪೋರ್ಟ್ ಪೋಲಿಯೊ ಮ್ಯಾನೇಜ್ಮೆಂಟ್ ಮತ್ತು ಸೆಕ್ಯುರಿಟಿ ವಹಿವಾಟುವಿನ ಟ್ರೈನಿಯಾಗಿ ಕೆಲಸ ಮಾಡಿ, 2 ವರ್ಷದ ನಂತರ ಸ್ವಂತ ಊರಿಗೆ ಅಗಮಿಸಿದರು. ತಮ್ಮ 24 ನೇ ವಯಸ್ಸಿನಲ್ಲಿ ಸ್ಟಾಕ್ ಮಾರ್ಕೆಟ್ ಖರೀದಿಸಲು ಪ್ರಾರಂಭಿಸಿ, ಬೆಂಗಳೂರಿನಲ್ಲಿ ಶಿವನ್ ಸೆಕ್ಯುರಿಟಿ ಕಂಪನಿ ಅರಂಭಿಸಿದರು. ಶಿವನ್ ಸೆಕ್ಯುರಿಟಿ ಈಗ ವೇ ಟು ವೆಲ್ತ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಇವರಿಗೆ ಅತಿ ಹೆಚ್ಚು ಲಾಭ ತಂದು ಕೊಟ್ಟ ಸಂಸ್ಥೆಯಾಗಿದೆ.
ಕಾಫಿ ಡೇ ಸ್ಥಾಪನೆ...
ಚಿಕ್ಕಮಗಳೂರು ಟು ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬರವ್ಯಾಲಿ ರೆಸಿಡೆನ್ಸಿಯಲ್ ಶಾಲೆ, ಸೆರಾಯ್ ರೆಸಾರ್ಟ್ ಪ್ರಾರಂಭಿಸಿ ಹೋಟೆಲ್ ಉದ್ಯಮಿಯೂ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ 1993 ರಲ್ಲಿ ಎಬಿಸಿ ಕಂಪನಿಯನ್ನು ಸ್ಥಾಪಿಸಿ, ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡರು. ಚಿಕ್ಕಮಗಳೂರು, ಹಾಸನ, ಮಡಿಕೇರಿಯಲ್ಲಿಯೂ ಕಾಫಿ ಬೆಳೆಯನ್ನು ಬೆಳೆದು ಹಾಗೂ ಬೆಳೆಗಾರರರಿಂದ ಕಾಫಿಯನ್ನು ಎಬಿಸಿ ಸಂಸ್ಥೆಯ ಮೂಲಕ ಖರೀದಿಸುತ್ತಾರೆ. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುತ್ತಾರೆ. ಕಾಫಿ ಡೇ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿದೆ. ಹಸಿರು ಕಾಫಿಯನ್ನು ರಫ್ತು ಮಾಡುವ ಅತಿ ದೊಡ್ಡ ರಫ್ತುದಾರ ಕಂಪನಿ ಹಾಗೂ ಏಷ್ಯಾದಲ್ಲೇ ಎರಡನೇ ದೊಡ್ಡ ಕಂಪನಿ ಇವರದ್ದಾಗಿದೆ.
1996 ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ 'ಕೆಫೆ ಕಾಫಿ ಡೇ' ಅರಂಭಿಸಿ, ನಂತರ ದೇಶ-ವಿದೇಶಗಳಲ್ಲೂ ಔಟ್ಲೆಟ್ ಅರಂಭಿಸಿದರು. ಐಟಿ ಕಂಪನಿಗಳಲ್ಲಿಯೂ ಔಟ್ಲೆಟ್ ಪ್ರಾರಂಭಿಸಿದ ಹೆಗ್ಗಳಿಗೆ ಇವರಿಗಿದೆ. ದೇಶ ಹಾಗೂ ವಿದೇಶದ ವಿಮಾನ ನಿಲ್ದಾಣಗಳಲ್ಲೂ ಕಾಫಿ ಔಟ್ಲೆಟ್ ತೆರೆಯುವುದರ ಮೂಲಕ, ಕಾಫಿಯಲ್ಲಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯುವಲ್ಲಿ ಯಶಸ್ವಿಯಾದವರು ಸಿದ್ಧಾರ್ಥ್.
2000 ರಲ್ಲಿ ಐಟಿಯಲ್ಲಿ ಹೂಡಿಕೆ ಮಾಡುವವರಿಗೆ ಮಾರ್ಗದರ್ಶನಕ್ಕಾಗಿ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಅರಂಭಿಸಿದ್ದು, ಜಿಟಿವಿ, ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇ ಟು ವೆಲ್ತ್ ಮತ್ತು ಇಟ್ಟಿಯಂ ಕಂಪನಿಯಲ್ಲಿ ಬೋರ್ಡ್ ಶೀಟ್ ಕೂಡ ಸಿದ್ಧಾರ್ಥ್ ಹೊಂದಿದ್ದಾರೆ. ಪೀಠೋಪಕರಣ ತಯಾರಿಕೆ ಕಂಪನಿಯನ್ನು ಚಿಕ್ಕಮಗಳೂರಿನಲ್ಲಿ ಅರಂಭಿಸಿ, ಕಾಫಿ ಉದ್ಯಮದ ಜೊತೆ ಚಿಕ್ಕಮಗಳೂರಿನ ಕತ್ತಲೆಕಾಡು ಎಸ್ಟೇಟ್‌ನಲ್ಲಿ ಪೀಠೋಪಕರಣ ಕಂಪನಿ ತೆರೆಯಲು ಕಾರಣಕರ್ತರಾದರು.
ಗಯಾನದ ಮಳೆಕಾಡಿನಿಂದ ಮರಗಳನ್ನ ತರಲು ಯೋಜನೆ ರೂಪಿಸಿ ದಕ್ಷಿಣ ಅಮೆರಿಕದ ಗಯಾನದಲ್ಲಿ ಸುಮಾರು 30 ವರ್ಷದ ಅವಧಿಗೆ 1.85 ದಶಲಕ್ಷ ಹೆಕ್ಟೇರ್ ಅಮೆಜೋನಿಯನ್ ಅರಣ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಅದರಿಂದಲೂ ಉದ್ಯಮ ನಡೆಸುವ ಚಿಂತನೆ ಮಾಡಿದರು.
ಮಂಗಳೂರು ಸಮೀಪದ ತೊಕ್ಕೊಟ್ಟು ಸೇತುವೆ ಬಳಿ ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಇವರ ಪತ್ತೆಗೆ ಪೊಲೀಸರು ಮತ್ತು ಎನ್ಡಿಆರ್ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಶತಾಯ ಗತಾಯ ಪ್ರಯತ್ನ ನಡೆಸಿದ್ದರು. ಆದ್ರೆ ಸಿದ್ಧಾರ್ಥ್ ಜೀವಂತವಾಗಿ ಮರಳದೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇಂದು ಬೆಳಗ್ಗೆ ಅವರು ನೇತ್ರಾವತಿ ನದಿ ಹಿನ್ನೀರು ಪ್ರದೇಶದಲ್ಲಿ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ.