ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪಕ್ಷದ ರಾಜ್ಯಾಧ್ಯಕ್ಷ ಬಿ .ಎಸ್ .ಯಡಿಯೂರಪ್ಪ ತಾಲೂಕಿನ ಸಖರಾಯ ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಪ್ರಚಾರ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2014ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈ ಬಾರಿ ಹೆಚ್ಚಾಗಿದೆ. ಈ ಬಾರಿ 15ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು. ಅಲ್ಲದೆ, ಕರ್ನಾಟಕದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ.
ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಒಂಭತ್ತು ತಿಂಗಳು ಕಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಪ್ರಧಾನಿ ಅವರನ್ನು ಸಿಎಂ ಎಲ್ಲೆಂದರಲ್ಲಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ಬಿಎಸ್ವೈ ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ವೈ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕಾಪ್ಟರ್ನಲ್ಲಿ ಕುಳಿತಿರುವಾಗಷ್ಟೇ ಅವರ ಸಂಬಂಧ ಚೆನ್ನಾಗಿರುತ್ತೆ. ಕೆಳಗಿಳಿದ ಮೇಲೆ ಅದು ಕಂಡುಬರುವುದಿಲ್ಲ. ಅಲ್ಲದೆ ಈ ದೋಸ್ತಿ ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲವೆಂದು ವ್ಯಂಗ್ಯವಾಡಿದರು.
ಇನ್ನು, ಪುಲ್ವಾಮಾ ದಾಳಿ ವಿಚಾರ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂದು ಸಿಎಂ ಹೇಳಿಕೆ ನೀಡಿದ್ದಾರೆನ್ನಲಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಿಜಕ್ಕೂ ನಿಮಗೆ ಗೊತ್ತಿದ್ದಿದ್ರೆ ರಾಷ್ಟ್ರಪತಿಗಳಿಗೋ, ಸಂಬಂಧಪಟ್ಟ ಅಧಿಕಾರಿಗಳಿಗೋ ಮಾಹಿತಿ ನೀಡಬೇಕಿತ್ತು. ಒಂದು ರಾಜ್ಯದ ನಾಯಕನಾಗಿ ತಿಳಿಸುವುದು ನಿಮ್ಮ ಕರ್ತವ್ಯವಾಗಿತ್ತು. ಇದೊಂದು ದೇಶದ್ರೋಹದ ಕೆಸಲವಾಗಿದೆ. ನಂಬಿಕೆ ದ್ರೋಹದ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಐಟಿ ದಾಳಿ ನಿರಂತರವಾಗಿ ನಡೆಯುತ್ತಿರುತ್ತದೆ. ಈ ದಾಳಿಯಲ್ಲಿ ಯಾವುದೇ ಪಕ್ಷ ಭೇದ ಭಾವ ಇಲ್ಲ. ಅಧಿಕಾರಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬುದು ಇಲ್ಲ. ಅವರ ಕೆಲಸ ಅವರು ಮಾಡುತ್ತಾರೆ ಎಂದರು.
ಇನ್ನು ಡಿ.ಎನ್.ಎ. ಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರ ಕತೆ ಏನು ಎಂಬ ಸಂತೋಷ್ ಹೇಳಿಕೆ ಕುರಿತು ಮಾತನಾಡಿದ ಬಿಎಸ್ವೈ ಅವರು, ತೇಜಸ್ವಿನಿ ಅನಂತ್ ಕುಮಾರ್ ಅವರ ಒಂದೇ ಹೆಸರನ್ನು ಆಯ್ಕೆ ಮಾಡಿ ಹೈಕಮಾಂಡ್ಗೆ ಕಳುಹಿಸಲಾಗಿತ್ತು. ಅನಂತ್ ಕುಮಾರ್ ಅವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಯಾರೇ ದೆಹಲಿಗೆ ಹೋದರು ಅವರ ಕೆಲಸವನ್ನು ಅನಂತಕುಮಾರ್ ಮಾಡಿ ಕೊಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ. ತೇಜಸ್ವಿ ಸೂರ್ಯರನ್ನು ಸಹ ದೊಡ್ಡ ಅಂತರದಲ್ಲಿ ಗೆಲ್ಲಿಸಲಾಗುವುದು ಎಂದು ಹೇಳಿದರು.