ಚಿಕ್ಕಮಗಳೂರು: ನರ್ಸ್ವೊಬ್ಬಳು ತನ್ನ ಪ್ರಿಯಕರನಿಗಾಗಿ ವಸತಿ ಶಾಲೆಯ ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ ತನ್ನ ಲವರ್ ಜೊತೆ ಬಿಡುತ್ತಿದ್ದ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣದಡಿ ನರ್ಸ್ ಸೇರಿ ಮೂವರು ಆರೋಪಿಗಳನ್ನು ಕಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸತಿ ಶಾಲೆಯ ಪ್ರಾಂಶುಪಾಲರು ಕಡೂರು ಠಾಣೆಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಸತಿ ಶಾಲೆಯ ಪಕ್ಕದ ಹಳ್ಳಿಯಲ್ಲಿ ಎನ್ಎಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಚಂದನಾ ಎಂಬುವಳು, ತನ್ನ ಪ್ರಿಯಕರ ವಿನಯ್ನಿಗಾಗಿ ಪಕ್ಕದ ಗ್ರಾಮದ ವಸತಿ ಶಾಲೆಯ ಇಬ್ಬರು ಬಾಲಕಿಯರನ್ನು ಬಳಸಿಕೊಂಡಿರುವ ಪ್ರಕರಣ. ನರ್ಸ್ ಬಾಲಕಿಯರಿಗೆ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ ಸಹಕರಿಸಿರುವ ಕುರಿತಾಗಿ ಕಡೂರು ಠಾಣೆಯಲ್ಲಿ ಪೊಕ್ಸೋ ಕಾಯಿದೆಯಡಿ ದೂರು ದಾಖಲಾಗಿದೆ.
ಅದೇ ವಸತಿ ಶಾಲೆಯಲ್ಲಿ ಡಿ ದರ್ಜೆ ನೌಕರನಾಗಿದ್ದ ಸುರೇಶ್ ಬಾಲಕಿಯರನ್ನು ಟ್ರೈನಿಂಗ್ಗೆ ಅಂತ ಹೇಳಿ ನರ್ಸ್ ಚಂದನಾ ಬಳಿ ಕರೆದುಕೊಂಡು ಬರುತ್ತಿದ್ದ. ಆಗ ವಿದ್ಯಾರ್ಥಿನಿಯರಿಗೆ ನರ್ಸ್ ಚಂದನಾ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸುತ್ತಿದ್ದಳು. ಬಾಲಕಿಯರು ಅರೆ ಪ್ರಜ್ಞಾವಸ್ಥೆಗೆ ಬರುತ್ತಿದ್ದಂತೆ ಲವರ್ ವಿನಯ್ ಜೊತೆ ಬಿಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ವಿಕ್ರಂ ಅಮಟೆ ಹೇಳಿದ್ದಿಷ್ಟು.. ಎಸ್ಪಿ ವಿಕ್ರಂ ಅಮಟೆ ಮಾಧ್ಯಮದವರ ಜೊತೆ ಮಾತನಾಡಿ, ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ ಪೊಕ್ಸೋ ಕಾಯಿದೆಯಡಿ ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ. ಹೆಚ್ಚಿನ ವಿವರಗಳನ್ನು ಹೇಳಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ವೈದ್ಯಕೀಯ ಪರೀಕ್ಷೆ, ಅಪ್ರಾಪ್ತರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಪಡೆದು, ಬಳಿಕ ದೃಢೀಕರಿಸಬಹುದು.
ಅದೇ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಡಿ ದರ್ಜೆ ನೌಕರ ಹಾಗೂ ಪಕ್ಕದ ಗ್ರಾಮದಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಚಂದನಾ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ಆರೋಪಿ ವಿನಯ್ ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದೇವೆ. ಡಿಎಸ್ಪಿ ತಲಕೇರಿ ನೇತೃತ್ವದಲ್ಲಿ ವಿವಿಧ ಹಂತದಲ್ಲಿ ತನಿಖೆ ಮುಂದುವರಿದಿದ್ದು, ಇನ್ನೂ ಯಾರೇ ಆರೋಪಿಗಳಿದ್ದರೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂಓದಿ: ಮಂಡ್ಯ: ಸಹಪಾಠಿಗಳಿಂದಲೇ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ವಿಡಿಯೋ ಮಾಡಿ ಬ್ಲ್ಯಾಕ್ಮೇಲ್!