ಚಿಕ್ಕಮಗಳೂರು: ವಿಧಾನ ಪರಿಷತ್ ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡರು ಸೋಮವಾರ ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಘಟನೆ ಸಂಬಂಧ ಜನ ಶತಾಬ್ದಿ ರೈಲಿನ ಚಾಲಕ ಸಿದ್ದರಾಮ್ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
''ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಹಳಿಯ ಮೇಲೆ ರೈಲಿಗೆ ನೇರಾ ನೇರ ನಿಂತಿರುವುದು ಕಾಣಿಸಿತ್ತು. ದೂರದಲ್ಲಿ ಕಂಡರೂ ಅತ್ಯಂತ ವೇಗದಲ್ಲಿದ್ದ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸಲು ಸಾಧ್ಯವಾಗಿಲ್ಲ'' ಎಂದು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಚಾಲಕ ಸಿದ್ದರಾಮ್ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರದ ಸೋಮವಾರ ರಾತ್ರಿ ಈ ದುರಂತ ನಡೆದಿತ್ತು. ಸರಪನಹಳ್ಳಿ ಬಳಿಯ ಅಯ್ಯನಕೆರೆ ಸಮೀಪದ ತೋಟದ ಮನೆಯಿಂದ ಸೋಮವಾರ ಸಂಜೆ ತೆರಳಿದ್ದ ಧರ್ಮೇಗೌಡ ರಾತ್ರಿಯಾದರೂ ವಾಪಸ್ ಆಗಿರಲಿಲ್ಲ. ಆತಂಕಗೊಂಡ ಕುಟುಂಬ ಸದಸ್ಯರು ತಕ್ಷಣ ಹುಡುಕಾಟ ನಡೆಸಿದ್ದಾರೆ. ಗುಣಸಾಗರ ಸಮೀಪ ರೈಲ್ವೆ ಹಳಿಯಲ್ಲಿ ಛಿದ್ರವಾಗಿದ್ದ ಮೃತದೇಹ ಪತ್ತೆಯಾಗಿತ್ತು.