ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನ ಅಗ್ನಿಶಾಮಕ ಸಿಬ್ಬಂದಿ ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ಕೂಡಲೇ ಬೈಕಿನಲ್ಲಿದ್ದ ಕುಮಾರ್ ಹಾಗೂ ಮಹೇಶ್ ರಸ್ತೆ ಮಧ್ಯೆಯೇ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಅವರಲ್ಲಿ ಒಬ್ಬರ ತಲೆಗೆ ತೀವ್ರ ಪೆಟ್ಟಾಗಿತ್ತು. ಪಕ್ಕದಲ್ಲೇ ಇದ್ದ ಅಗ್ನಿಶಾಮಕ ಠಾಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ರಸ್ತೆಯಲ್ಲಿ ನರಳಾಡುತ್ತಿದ್ದವರನ್ನ ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದರು.
ಒಂದು ಗಾಡಿಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿದರು. ಆ ಬಳಿಕ ಮೊತ್ತೊಬ್ಬ ಬೈಕ್ ಸವಾರನನ್ನೂ ಮತ್ತೊಂದು ಗಾಡಿಯಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಅವರ ಜೇಬಲ್ಲಿ ಸುಮಾರು ಒಂದು ಲಕ್ಷದ ಇಪ್ಪತ್ತೈದು ಸಾವಿರ ಹಣವಿತ್ತು. ಬೈಕಿನಲ್ಲಿ ಬಿದ್ದವರು ಕಾಂಟ್ರಾಕ್ಟ್ ಕೆಲಸಗಾರರು, ಕೆಲಸದ ನಿಮಿತ್ತ ಹಣ ಪಡೆದುಕೊಂಡು ಬರುವಾಗ ಅಪಘಾತವಾಗಿ ಬಿದ್ದಿದ್ದಾರೆ. ಬೈಕಿನಿಂದ ಬಿದ್ದಾಗ ಅವರ ಜೇಬಲ್ಲಿದ್ದ ಒಂದು ಲಕ್ಷದ ಇಪ್ಪತ್ತೈದು ಸಾವಿರ ಹಣ ತೆಗೆದುಕೊಂಡ ಅಗ್ನಿಶಾಮಕ ಸಿಬ್ಬಂದಿ, ಗಾಯಾಳುಗಳು ಯಾರಿಗೆ ಹೇಳಿದರೋ ಅವರ ಕೈಗೆ ಹಣ ಹಾಗೂ ಮೊಬೈಲ್ ನೀಡಿ ಮಾನವೀಯತೆ ಮೆರೆದಿದ್ದಾರೆ.