ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಗಿದೆ. ಮುಂಜಾನೆಯಿಂದ ಪ್ರಾರಂಭವಾಗಿರುವ ಮಳೆಗೆ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಬಣಕಲ್, ದಾರದಹಳ್ಳಿ, ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಮುಂಜಾನೆಯಿಂದಲೂ ನಿರಂತರ ಸುರಿಯುತ್ತಿರುವ ಮಳೆಯಿಂದ ಮಳೆಯ ನೀರು ರಸ್ತೆಯ ಮೇಲೆ ನುಗ್ಗುತ್ತಿದ್ದು, ಮಳೆಯ ನಡುವೆಯೇ ಹೆಂಗಳೆಯರು ಗೌರಿಯನ್ನು ಪೂಜೆ ಮಾಡಿ ಗೌರಿಯನ್ನು ಬರ ಮಾಡಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣ ಬಿಡುವು ನೀಡಿದ್ದ. ಇಂದಿನಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದ್ದು, ರಸ್ತೆ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯವಾಗಿದೆ.