ಚಿಕ್ಕಮಗಳೂರು : ಸಿದ್ದು, ಬಿಎಸ್‍ವೈ, ಮೋದಿ ಲೀಡರ್ಗಳೆಂದು ನಾನು ಒಪ್ಪುತ್ತೇನೆ. ಆದರೆ, ರಾಹುಲ್, ಪ್ರಿಯಾಂಕಾ, ಸೋನಿಯಾ ಅವರನ್ನು ಲೀಡರ್ ಎನ್ನಲು ಆಗಲ್ಲ. ಕಾಂಗ್ರೆಸ್‍ಗೆ ನಿರ್ದಿಷ್ಟವಾದ ತಾತ್ವಿಕ ತಳಹದಿಯೂ ಇಲ್ಲ, ರಾಷ್ಟ್ರ ನಾಯಕತ್ವವೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಕಾಂಗ್ರೆಸ್‍ನವರಿಗೆ ನಿರ್ದಿಷ್ಟತೆ ಇಲ್ಲ, ಅವರಲ್ಲಿ ಎಡಬಿಡಂಗಿತನವಿದೆ. ಕೇರಳದಲ್ಲಿ ಕಮ್ಯುನಿಷ್ಟರನ್ನು ವಿರೋಧಿಸಿ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರು ಕುಟುಂಬದ ನಾಯಕತ್ವವನ್ನು ಒಪ್ಪಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಜನ ಒಪ್ಪಲ್ಲ. ಕಾಂಗ್ರೆಸ್‍ಗೆ ರಾಷ್ಟ್ರಮಟ್ಟದಲ್ಲಿ ನಾಯಕತ್ವ ಇಲ್ಲ, ಅಲ್ಲಿರುವುದು ಕುಟುಂಬ ನಾಯಕತ್ವ ಮಾತ್ರ. ಸೋನಿಯಾ ಗಾಂಧಿ, ರಾಜೀವ್ ಗಾಂಧಿಯ ಪತ್ನಿ ಅಷ್ಟೆ. ರಾಹುಲ್, ಪ್ರಿಯಾಂಕಾ, ರಾಜೀವ್ ಗಾಂಧಿ- ಸೋನಿಯಾ ಗಾಂಧಿ ಮಕ್ಕಳು ಎಂದರು.
ರಾಹುಲ್ ಗಾಂಧಿ ಕಂಡ್ರೆ ಬಿಜೆಪಿಗೆ ಭಯ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯೇ ಗೆಲ್ಲಲಿಲ್ಲ. ಹೈಕಮಾಂಡ್‍ಗೆ ನಜರ್ ರೂಪಿಸುವ ಕಲ್ಚರ್ ಕಾಂಗ್ರೆಸ್‍ನಲ್ಲಿದೆ. ರಾಹುಲ್ ನೇತೃತ್ವದಲ್ಲಿ ಯಾವ ಚುನಾವಣೆ ಗೆದ್ದಿದ್ದಾರೆ, ನಮಗ್ಯಾಕೆ ಭಯ. ರಾಹುಲ್ ನೇತೃತ್ವದ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಕ್ಕಿದ್ದು ಒಂದೇ ಕ್ಷೇತ್ರ. ನಾವು ಬಲವಾದ ಅಭ್ಯರ್ಥಿ ಹಾಕಿ ಕ್ಯಾಂಪೇನ್ ಮಾಡಿದ್ರೆ ಅದನ್ನೂ ಗೆಲ್ಲಲು ಬಿಡ್ತಿರಲಿಲ್ಲ. ನಮ್ಮ ಪೂರ್ವ ತಯಾರಿಯ ಕೊರತೆಯಿಂದ ಒಂದು ಕ್ಷೇತ್ರ ಗೆದ್ರು ಅಷ್ಟೆ. ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಕ್ಯಾಂಪೇನ್ ಮಾಡಿಸಿದ್ದರೆ ಅದನ್ನೂ ನಾವು ಗೆಲ್ತಿದ್ವಿ ಎಂದು ಹೇಳಿದರು.
ಓದಿ : ನಿಮ್ಮ ಸರ್ಕಾರವಿದ್ದಾಗ ಪೊಲೀಸರೇ ದಂಗೆ ಎದ್ದಿದ್ದನ್ನು ಮರೆಯದಿರಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್
ಮಾಜಿ ಸಿಎಂ ಖಜಾನೆಯನ್ನು ಭರ್ತಿ ಮಾಡಿ ಹೋಗಿಲ್ಲ. ಖಾಲಿ ಮಾಡಿ ಹೆಚ್ಚುವರಿ ಸಾಲ ಮಾಡಿ ಹೋಗಿದ್ದರು. ವಿಜಯನಗರದ ಅರಸರಂತೆ ಶ್ರೀಮಂತಿಕೆ ತುಂಬಿಸಿ ಹೋಗಿದ್ದರೆ ಏನು ಬೇಕಾದರು ಹೇಳಬಹುದಿತ್ತು. ಆದರೆ, ಅವರು ಅವರ ಮನೆ ಖಜಾನೆ ತುಂಬಿಸಿಕೊಂಡು ಹೋದರು. ಪಾರ್ಟಿ ಖಜಾನೆ ತುಂಬಿಸಿ ರಾಜ್ಯದ ಖಜಾನೆ ಖಾಲಿ ಮಾಡಿ ಹೋದರು. ಅವರು ಇದ್ದಾಗ ಏನೇನು ಕೊಟ್ಟರು ಅನ್ನೋದರ ಪಟ್ಟಿ ಇದೆ ಎಂದರು.