ಚಿಕ್ಕಮಗಳೂರು: ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವ ಜನರೇ ಹೆಚ್ಚು, ಇನ್ನು ಶೌಚಾಲದೊಳಗೆ ಹೋಗೋದು ಅಂದ್ರೆ ನರಕದ ದಾರಿಗಿಂತ ಕಡಿಮೆ ಇಲ್ಲ. ಆದ್ರೆ ಇಲ್ಲೊಂದು ಶೌಚಾಲಯ ಮಾತ್ರ ಇದೆಲ್ಲಕ್ಕಿಂತಲೂ ಭಿನ್ನವಾಗಿದ್ದು, ಈ ಶೌಚಾಲಯ ಬಳಸಿದ ಮಂದಿ ಅದರ ಮುಂದೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಗುತ್ತಾರೆ.
ಇಂತಹ ಶೌಚಾಲಯ ಇರೋದು ಮಲೆನಾಡು ಚಿಕ್ಕಮಗಳೂರಿನ ತರೀಕೆರೆ ನಗರದಲ್ಲಿ. ವಿಶೇಷ ಅಂದ್ರೆ ಈ ಶೌಚಾಲಯದ ಆಕರ್ಷಕ ಚಿತ್ರಗಳು ರಚಿಸಿರೋದ್ರಿಂದ ಇಲ್ಲಿ ಬರುವ ಮಂದಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಇದೊಂದೇ ಅಲ್ಲ ನಗರದ ಹತ್ತಾರು ಸಾರ್ವಜನಿಕರ ಶೌಚಾಲಯಗಳಿಗೆ ಹೊಸ ರೂಪ ಬಂದಿದೆ. ಒಂದಕ್ಕಿಂತ ಒಂದು ಶೌಚಾಲಯಗಳು ಕಲಾ ಕೃತಿಗಳಿಂದಾಗಿ ಹಾಗೂ ಬಣ್ಣ - ಬಣ್ಣದ ಚಿತ್ತಾರಗಳಿಂದಾಗಿ ಕಂಗೊಳಿಸುತ್ತಿದೆ.
ಶೌಚಾಲಯದ ಗೋಡೆಯ ಮೇಲೆ ಪಕ್ಷಿಗಳು, ಪ್ರಾಣಿಗಳು ಸೇರಿದಂತೆ ಸಾಂಸ್ಕೃತಿಕ ಮೆರುಗು ಹೆಚ್ಚಿಸುವ ವಿವಿಧ ಕಲಾಕೃತಿ ರಚಿಸಲಾಗಿದೆ. ಸಾರ್ವಜನಿಕ ಶೌಚಾಲಯ ಎಂದರೆ ಮೂಗು ಮುಚ್ಚಿಕೊಂಡು ತೆರಳುತ್ತಿದ್ದ ನಾಗರಿಕರು ಇದೀಗ ಚಿತ್ತಾಕರ್ಷಕ ಶೌಚಾಲಯ ಕಂಡು ಅಚ್ಚರಿಗೆ ಒಳಗಾಗಿದ್ದಾರೆ.
ತರೀಕೆರೆ ನಗರದಲ್ಲಿರುವ ಶೌಚಾಲಯಗಳು ಮೊದಲು ಎಲ್ಲ ಶೌಚಾಲಯಗಳಂತೆ ಗಬ್ಬು ನಾರುತ್ತಿದ್ದವು. ಆದರೇ ಒಂದು ವರ್ಷದ ಹಿಂದೆ ತರೀಕೆರೆ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಬಂದ ಮಹಾಂತೇಶ್, ತರೀಕೆರೆ ನಗರವನ್ನು ಸುಂದರ ನಗರವನ್ನಾಗಿ ಮಾಡಬೇಕೆಂಬ ಪಣತೊಟ್ಟಿದ್ದು, ಇದರ ಪ್ರತಿಫಲವೇ ಈ ಸುಂದರ ಶೌಚಾಲಯವಾಗಿ ಮಾರ್ಪಟ್ಟಿವೆ.
ಒಟ್ಟಾರೆ ಸ್ಥಳೀಯ ಆಡಳಿತದ ಕಾರ್ಯಕ್ಕೆ ಜನತೆ ಮೆಚ್ಚುಗೆಯ ಮಾತನಾಡುತ್ತಿದ್ದು, ಶೌಚಾಲಯದ ಸ್ವಚ್ಛತೆಗೆ ಜನ ಫುಲ್ ಮಾರ್ಕ್ಸ್ ನೀಡಿದ್ದಾರೆ.