ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಅರ್ಜುನ್ ಎಂಬುವರು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಪುನೀತ್ ಎಂಬ ಯುವಕನನ್ನು ಠಾಣೆಗೆ ಕರೆ ತಂದು ಹಲ್ಲೆ ನಡೆಸಿ, ನಂತರ ಮೂತ್ರ ಕುಡಿಸಿದ್ದಾರೆ ಎಂಬ ಯುವಕನ ಆರೋಪದ ಪ್ರಕರಣ ದಿನದಿಂದ ದಿನಕ್ಕೆ ನಾನಾ ತಿರುವು ಪಡೆದು ಕೊಳ್ಳುತ್ತಿದೆ.
ಸದ್ಯ ಪಿಎಸ್ಐ ಅರ್ಜುನ್ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ಪುತ್ತೂರಿನ ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಆದೇಶ ಮಾಡಲಾಗಿದೆ ಎಂದು ಚಿಕ್ಕಮಗಳೂರಿನ ಎಸ್ಪಿ ಅಕ್ಷಯ್ ಮಾಹಿತಿ ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಪುನೀತ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆ ತಂದು ಆತನ ಮೇಲೆ ಹಲ್ಲೆ ನಡೆಸಿ, ನಂತರ ಅವನು ಬಾಯಾರಿದಾಗ ಮೂತ್ರ ಕುಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತ ಯುವಕ ಪುನೀತ್ ಎಂಬಾತನೇ ಈ ಬಗ್ಗೆ ವಿಡಿಯೋ ಮಾಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದನು.
ಈ ಆರೋಪದ ಮೇಲೆ ಪಿಎಸ್ಐ ಅರ್ಜುನ್ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಕುರಿತು ಜಿಲ್ಲಾ ಎಸ್ಪಿ ಅಕ್ಷಯ್ ಅವರು ನೀಡಿದ ವರದಿ ಆಧಾರದ ಮೇಲೆ ಡಿಐಜಿ ಅವರು ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.