ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಂಗು ರಾಜ್ಯದೆಲ್ಲೆಡೆ ಕಂಡು ಬರ್ತಿದ್ರೂ ಕಾಫಿನಾಡಲ್ಲಿ ಮಾತ್ರ ಈ ಎಲೆಕ್ಷನ್ ಅಬ್ಬರವೇ ಇಲ್ಲದಂತಾಗಿದೆ. ಅದ್ರಲ್ಲೂ ಕಸ್ತೂರಿ ರಂಗನ್ ವರದಿ ಯೋಜನಾ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳಲ್ಲಿ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಸಲ್ಲಿಕೆಯಾದ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳು ಕಣದಿಂದ ದೂರ ಸರಿದು ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಒಟ್ಟು 16 ಗ್ರಾಮ ಪಂಚಾಯಿತಿಗಳ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಬಾರಿ ಚುನಾವಣೆಯೇ ಇಲ್ಲದಂತಾಗಿದೆ.
ಈ ಗೊಡ್ಡು ರಾಜಕೀಯವೇ ಬೇಡ ಎಂದು ತೀರ್ಮಾನಿಸಿ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಬಹಿಷ್ಕರಿಸಿ ಜನಸಾಮಾನ್ಯರು ಹೋರಾಟಕ್ಕೆ ಧುಮುಕಿದ್ದಾರೆ. ಬರೋಬ್ಬರಿ 16 ಗ್ರಾಮ ಪಂಚಾಯಿತಿಗಳಿಗೆ ಯಾರೂ ಕೂಡ ನಾಮಪತ್ರ ಸಲ್ಲಿಸದೇ ಚುನಾವಣೆ ಬಹಿಷ್ಕರಿಸಿ ಬೃಹತ್ ಜನಾಂದೋಲನ ನಡೆಸಿದ್ದಾರೆ. ಆದರೇ ವಿಪರ್ಯಾಸ ಅಂದ್ರೆ ಯಾವ ರಾಜಕೀಯದ ಸಹವಾಸವೇ ಬೇಡ ಎಂದು ಜನರು ಪ್ರತಿಭಟನೆಗೆ ಇಳಿದಿದ್ರೂ ಅದು ಸಫಲವಾಗಲಿಲ್ಲ. ಬದುಕಿನ ಹೋರಾಟದ ವೇದಿಕೆಯಲ್ಲಿ ರಾಜಕೀಯದ ಕೆಸರೆರಚಾಟ, ತಳ್ಳಾಟ-ನೂಕಾಟ ನಡೆದು ಹೋರಾಟದ ದಿಕ್ಕೇ ತಪ್ಪಿದಂತಾಯ್ತು. ಏನಕ್ಕಾಗಿ ಈ ಹೋರಾಟ ಅನ್ನೋದನ್ನೇ ಮರೆತ ಜನ ಪ್ರತಿನಿಧಿಗಳು, ಪಕ್ಷಗಳ ಕಾರ್ಯಕರ್ತರು ತಳ್ಳಾಟ, ನೂಕಾಟ ನಡೆಸಿದ್ದಾರೆ.
ಜಿಲ್ಲೆಯ ಜನರಲ್ಲಿ ಕಸ್ತೂರಿ ರಂಗನ್ ವರದಿ ಕುರಿತಂತೆ ಗೊಂದಲಗಳು ಇರೋದ್ರಿಂದ ನಮ್ಮ ಬದುಕು ಯಾವಾಗ ಬೀದಿಗೆ ಬೀಳುತ್ತೋ ಅನ್ನೋ ಆತಂಕ ಅವರನ್ನ ಕಾಡುತ್ತಿದೆ. ಹಾಗಾಗಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಲೇಬಾರದು ಎಂದು ಆಗ್ರಹಿಸಿ ಕಳೆದ ಎರಡು ಮೂರು ತಿಂಗಳಿನಿಂದ ಮಲೆನಾಡಿನಲ್ಲಿ ಹೋರಾಟ ನಡೆದುಕೊಂಡು ಬರುತ್ತಿದೆ. ಹಳ್ಳಿ ಫೈಟ್ಗೆ ಮುಹೂರ್ತ ನಿಗದಿಯಾದ ಮೇಲೆ ಈ ಹೋರಾಟಕ್ಕೆ ಮತ್ತೊಂದು ಅಸ್ತ್ರ ಸಿಕ್ಕಿತ್ತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರೂ ಕೂಡ ನಾಮಪತ್ರ ಸಲ್ಲಿಸದೇ ಪಕ್ಷಾತೀತವಾಗಿ ಬಹಿಷ್ಕರಿಸಿ ಇಂದು ಕೇಂದ್ರ ಸ್ಥಾನವಾದ ಚಿಕ್ಕಮಗಳೂರಲ್ಲಿ ಬೃಹತ್ ಹೋರಾಟಕ್ಕೆ ವೇದಿಕೆ ರೂಪಿಸಲಾಯ್ತು. ಆದ್ರೆ ಯಾವ ರಾಜಕೀಯ ಬೇಡ ಎಂದು ತೀರ್ಮಾನಿಸಿ ಹೋರಾಟಕ್ಕೆ ವೇದಿಕೆ ಸಿದ್ಧವಾಗಿತ್ತೋ, ಅದೇ ವೇದಿಕೆಯಲ್ಲಿ ರಾಜಕೀಯದ ಕೆಸರೆರಚಾಟ, ತಳ್ಳಾಟ, ನೂಕಾಟ ನಡೆದು ಹೋರಾಟದ ದಿಕ್ಕೇ ತಪ್ಪಿದಂತಾಗಿದೆ. ಶೃಂಗೇರಿ ಕ್ಷೇತ್ರದ ಹಾಲಿ-ಮಾಜಿ ಶಾಸಕರ ಮಾತಿನ ಸಮರ ಕಾರ್ಯಕ್ರಮದ ಮೂಲ ಆಶಯವನ್ನೇ ನುಂಗಿ ಹಾಕಿತು.
ಕಳೆದ ವಾರ ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಯೋಜನೆಯ ವಿರುದ್ಧವಾಗಿ ಮಾತನಾಡುವ ಅವಕಾಶ ಶೃಂಗೇರಿಯ ಹಾಲಿ ಶಾಸಕ ರಾಜೇಗೌಡರಿಗೆ ಸಿಕ್ಕಿದ್ರೂ ಮಾತನಾಡಲಿಲ್ಲ. ನಮ್ಮ ಆಡಳಿತ ಪಕ್ಷದ ಶಾಸಕ, ಮೂಡಿಗೆರೆಯ ಕುಮಾರಸ್ವಾಮಿಯವರೇ ಪ್ರತಿಪಕ್ಷದ ಶಾಸಕರಂತೆ ಮಾತನಾಡಿದ್ರು. ಹಿಂದೆಯೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಸ್ತೂರಿ ರಂಗನ್ ವರದಿ ಯೋಜನೆ ವಿರುದ್ಧ ಅಪಸ್ವರ ಎತ್ತಲಿಲ್ಲ ಎಂದು ಮಾಜಿ ಸಚಿವ ಜೀವರಾಜ್ ಭಾಷಣ ಮಾಡಿದ್ದು, ಕೈ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಲು ಕಾರಣವಾಯ್ತು. ಹೀಗಾಗಿ ವೇದಿಕೆ ಮುಂಭಾಗ ಬಂದು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ರೋಷವೇಷವನ್ನು ಹೊರಹಾಕಿದ್ರು. ಆಗ ಕಮಲ-ಕೈ ಕಾರ್ಯಕರ್ತರು, ಮುಖಂಡರ ಮಧ್ಯೆ ಪರಸ್ಪರ ತಳ್ಳಾಟ-ನೂಕಾಟ ನಡೆದು ಜನರು ಮೂಕ ಪ್ರೇಕ್ಷಕರಾಗಬೇಕಾಯ್ತು.
ಒಂದೆಡೆ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಡೆಯುತ್ತಿರುವ ಹೋರಾಟ ಕಾಫಿನಾಡಲ್ಲಿ ದಿನೇ ದಿನೇ ಹೆಚ್ಚಿನ ಕಾವು ಪಡೆದುಕೊಳ್ತಿದೆ. ರಾಜಕೀಯವನ್ನ ಹೊರಗಿಟ್ಟು ಪಕ್ಷಾತೀತವಾಗಿ ನಡೀತಿರೋ ಹೋರಾಟದ ಪ್ರತಿಫಲವಾಗಿ ಈಗಾಗಲೇ ಜಿಲ್ಲೆಯ 16 ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು, ಡಿಸೆಂಬರ್ 11ಕ್ಕೆ ನಾಮಪತ್ರ ಸಲ್ಲಿಸಲು ಅವಧಿ ಮುಗಿದ್ರೂ ಕೂಡ ನಾಮಪತ್ರವೇ ಸಲ್ಲಿಸಿಲ್ಲ. ಬದುಕು-ಭವಿಷ್ಯದ ಹೋರಾಟದ ದೃಷ್ಟಿಯಿಂದ ಚುನಾವಣೆ ನಮಗೆ ಮುಖ್ಯವಲ್ಲ ಎಂದು ಜನರು ಈಗಾಗಲೇ ತೀರ್ಮಾನಿಸಿದ್ದಾರೆ. ಆದ್ರೆ ಅದೇ ಹೋರಾಟದ ವೇದಿಕೆಯಲ್ಲೇ ನಾಮಪತ್ರ ಸಲ್ಲಿಸದೇ ಚುನಾವಣೆ ಬಹಿಷ್ಕಾರ ಮಾಡಿ ಬಂದ ಜನರೆದುರೇ ಬಹಿರಂಗವಾಗಿ ರಾಜಕೀಯದ ಕಚ್ಚಾಟ ನಡೆದಿದ್ದು ಮಾತ್ರ ವಿಪರ್ಯಾಸವೇ ಸರಿ.