ಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ ಎನ್ಎಸ್ಜಿಯ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ನಡೆದಿದೆ. ದೀಪಕ್ (22) ಮೃತರು ಎಂದು ಗುರುತಿಸಲಾಗಿದೆ. ಮೃತ ದೀಪಕ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೇಬೈಲು ಸಮೀಪದ ಜೈಪುರ ನಿವಾಸಿ. 2018ರಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಸೇರಿದ್ದ ದೀಪಕ್ ಇತ್ತೀಚೆಗೆ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. 2020ರಲ್ಲಿ ಮದುವೆಯಾಗಿದ್ದ ದೀಪಕ್ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಒಂದು ತಿಂಗಳ ಮೇಲೆ ರಜೆಗೆ ಊರಿಗೆ ಬಂದಿದ್ದ ಇವರು ಇತ್ತೀಚೆಗೆ ತಾವು ಖರೀದಿಸಿದ್ದ ನೂತನ ಬೈಕಿನಲ್ಲಿ ರಜೆ ಮುಗಿಸಿ ಕೆಲಸಕ್ಕೆ ಹೋಗಲು ಬೆಂಗಳೂರಿಗೆ ಹೋಗುವಾಗ ಯಡಿಯೂರಿನ ಹೇಮಾವತಿ ಕ್ರಾಸ್ ಬಳಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೈಪುರ ಗ್ರಾಮದ ಕೃಷ್ಣಮೂರ್ತಿಯವರ ಏಕೈಕ ಸುಪತ್ರ ದೀಪಕ್ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಕ್ಕನ ಮದುವೆ ದಿನ ರಸ್ತೆ ಅಪಘಾತದಲ್ಲಿ ತಮ್ಮ ಸಾವು: ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ, ಅಕ್ಕನ ಮದುವೆಗೆಂದು ಕಲ್ಯಾಣ ಮಂಟಪಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ತಮ್ಮನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಬಳಿ ನಡೆದಿದೆ. ಮೃತನನ್ನು ಬನ್ನೂರು ಸಮೀಪದ ಮಲಿಯೂರು ಗ್ರಾಮದ ಶಿವು ಎಂದು ಗುರುತಿಸಲಾಗಿದೆ. ಬನ್ನೂರು ಬಳಿಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ತೆರಳುವಾಗ ಎದುರುಗಡೆ ಬಂದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಶಿವು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ತುಮಕೂರು: ನಿಂತಿದ್ದ ಬಸ್ ಗೆ ಟಿಟಿ ಡಿಕ್ಕಿ: ಇಬ್ಬರು ಸಾವು
ಘಟನಾ ಸ್ಥಳಕ್ಕೆ ಬನ್ನೂರು ಠಾಣಾ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಟ್ರ್ಯಾಕ್ಟರ್ನ ಚಾಲಕ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ. ಮದುವೆ ಸಡಗರ ಸಂಭ್ರಮ ತುಂಬಿದ ಮನೆಯಲ್ಲಿ ದುಃಖ ಮಡುಗಟ್ಟಿದ್ದು, ಮದುವೆಯನ್ನು ಸರಳವಾಗಿ ಬೇಗ ಮುಗಿಸಿ ತಮ್ಮನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಕಲ್ಯಾಣ ಮಂಟಪದಿಂದ ಬಂದಿದ್ದಾರೆ.
ಟ್ರ್ಯಾಕ್ಟರ್ ಬೈಕ್ ಮುಖಾಮುಖಿ - ಪಿಡಿಒ ಸಾವು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಪಿಡಿಓ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯಿತಿ ಪಿಡಿಒ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನವರಾದ ಶಿವಾನಂದ ಬಸಪ್ಪ ಹಡಪದ ಮೃತರಾಗಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅಕ್ಕನ ಮದುವೆ ದಿನವೇ ತಮ್ಮ ರಸ್ತೆ ಅಪಘಾತದಲ್ಲಿ ದುರ್ಮರಣ