ಚಿಕ್ಕಮಗಳೂರು: ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ. ಇದನ್ನು ಮುಸ್ಲೀಮರ ಬಂಗಾರದ ಪಾದಗಳಿಗೆ ನಮಸ್ಕಾರ ಮಾಡಿ ನಾನು ಹೇಳುತ್ತೇನೆ ಎಂದು ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್ ಭರವಸೆ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮಾತನಾಡಿ, ಇದು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಬರೋರಿಗೆ ಮಾತ್ರ ಅನ್ವಯ ಆಗುತ್ತದೆ. ಮುಸ್ಲಿಮ್ ಸಹೋದರರಿಗೆ ತಪ್ಪು ಸಂದೇಶ ನೀಡಿ ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುವಂತೆ ಮಾಡಿದ್ದಾರೆ ಎಂದರು.
ಪೇಜಾವರ ಶ್ರೀಗಳು ಬೇಗ ಗುಣಮುಖರಾಗಲಿ. ಈ ಹಿನ್ನೆಲೆಯಲ್ಲಿ ನಾನು ಮಂತ್ರಾಲಯದ ಗುರುರಾಯರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ರು.