ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲು, ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದ ರೈತರ ಜಮೀನಿನೊಂದಿಗೆ ಶ್ರೀಗಂಧದ ಮರಗಳನ್ನೂ ಸ್ವಾಧೀನಪಡಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರ, ಪರಿಹಾರ ನೀಡದೇ ಸತಾಯಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹಳಿಯೂರು ಗ್ರಾಮದ 22 ಮಂದಿ ರೈತರು 8 ವರ್ಷಗಳಿಂದ ಶ್ರೀಗಂಧದ ಮರಗಳನ್ನು ಬೆಳೆದಿದ್ದರು. ನಾಲ್ಕು ವರ್ಷದ ಹಿಂದೆ, ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈತರ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ, ವಶಪಡಿಸಿಕೊಂಡ ಭೂಮಿಗೆ ಮಾತ್ರ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ. ಆದರೆ, ಆ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರ ನೀಡಲು ಪ್ರಾಧಿಕಾರ ಮೀನಮೇಷ ಎಣಿಸುತ್ತಿದೆ.
ಇದನ್ನೂ ಓದಿ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ತರಾಟೆ
ಮೊದಲು ಶ್ರೀಗಂಧದ ಮರಗಳಿಗೆ ಪರಿಹಾರ ನೀಡಲು ಸತಾಯಿಸಿದ್ದ ಹೆದ್ದಾರಿ ಪ್ರಾಧಿಕಾರ, ಸರ್ಕಾರಿ, ಖಾಸಗಿ ಏಜೆನ್ಸಿ ಎಂದು ವರ್ಷಗಟ್ಟಲೆ ಸಮಯ ದೂಡುತ್ತಲ್ಲೇ ಬಂದಿದೆ. ಈ ವೇಳೆ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ, ಕೊನೆಗೆ ಶ್ರೀಗಂಧ ಮರಗಳ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶಕ್ಕೆ ಹೆದ್ದಾರಿ ಪ್ರಾಧಿಕಾರ ಮೇಲ್ಮನವಿ ಸಲ್ಲಿಸಿದೆ. ಹೀಗಾಗಿ, ಮರಗಳಿಗೆ ಪರಿಹಾರ ನೀಡುವ ಗೊಂದಲ ಹಾಗೆಯೇ ಮುಂದುವರೆದಿದೆ. ಹೈಕೋರ್ಟ್ ಆದೇಶದಂತೆ ಪರಿಹಾರ ನೀಡುವ ಬದಲು, ಹೆದ್ದಾರಿ ಪ್ರಾಧಿಕಾರ ಮೇಲ್ಮನವಿ ಸಲ್ಲಿಸಿರುವುದು ರೈತರನ್ನು ಕೆರಳಿಸಿದೆ.
ಜಮೀನಿನ ಜೊತೆ ಕಷ್ಟಪಟ್ಟು ಬೆಳೆದ ಶ್ರೀಗಂಧದ ಮರಗಳನ್ನು ಸ್ವಾಧೀನಪಡಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರ, ಜಮೀನಿಗೆ ಮಾತ್ರ ಪರಿಹಾರ ಕಡಿಮೆ ನೀಡಿರುವುದಲ್ಲದೇ, ಮರಗಳಿಗೆ ಪರಿಹಾರ ನೀಡಲು ಸತಾಯಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.