ಚಿಕ್ಕಮಗಳೂರು: ರಾಣಿ ಚೆನ್ನಮ್ಮಳಿಗೆ ಮಲ್ಲಪ್ಪಶೆಟ್ಟಿ ಮೋಸ ಮಾಡಿದಂತೆ ರಾಜಕೀಯದಲ್ಲಿ ಮೋಸ ಮಾಡಬೇಕು ಎಂಬ ಜನ ಇರುತ್ತಾರೆ. ಎಲ್ಲವನ್ನೂ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವವರು ಇರುತ್ತಾರೆ. ಎಲ್ಲಿಯವರೆಗೆ ಜನರ ಪ್ರೀತಿಯ ರಕ್ಷಾಕವಚ ಇರುತ್ತದೆಯೋ ಅಲ್ಲಿವರೆಗೆ ಯಾರೂ ಏನೂ ಮಾಡಲಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, ಬಿಜೆಪಿ ಪಕ್ಷ ತೊರೆದು ಹೋದ ಕೆಲವರ ವಿರುದ್ಧ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜನೆ ಮಾಡಿದ್ದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದ ತಮ್ಮ ಮಾಜಿ ಆಪ್ತ ತಮ್ಮಯ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಮೋದಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡ್ತಾರೆ. ಕೊರೊನಾ ಸಮಯದಲ್ಲಿ ವಿಮಾನ ನಿಲ್ದಾಣ, ರೈಲು ಸೇವೆಗಳು ನಿಂತಿದ್ದವು. ಸಾಂಕ್ರಾಮಿಕ ಅವಧಿ ಮುಗಿದ ಮೇಲೆ ಅದ್ಯಾವುದೂ ನಿಲ್ಲಲಿಲ್ಲ. ನಾವೆಲ್ಲಾ ಇಷ್ಟು ಖುಷಿಯಾಗಿದ್ದೇವೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ. ಅಮೆರಿಕದಲ್ಲಿ ಕೊರೊನಾ ವ್ಯಾಕ್ಷಿನೇಷನ್ ಡಾಕ್ಯುಮೆಂಟ್ ಅನ್ನು ಪೇಪರ್ನಲ್ಲಿ ನೀಡಲಾಗುತ್ತದೆ. ಭಾರತದಲ್ಲಿ ವಾಕ್ಸಿನೇಷನ್ ಆದ 15 ನಿಮಿಷದಲ್ಲಿ ಡಿಜಿಟಲ್ ರೂಪದಲ್ಲಿ ಆನ್ಲೈನ್ನಲ್ಲಿ ಸಿಗುತ್ತದೆ.
ಜೈ ಶಂಕರ್ ಅವರಿಗೆ ವಿದೇಶದಲ್ಲಿ ಕೊರೊನಾ ವಾಕ್ಸಿನೇಷನ್ ಡಾಕ್ಯುಮೆಂಟ್ ಕೇಳಿದ್ರಂತೆ. ಆಗ ಅವರು ಆನ್ಲೈನ್ನಲ್ಲಿ ವಾಕ್ಸಿನೇಷನ್ ಡಾಕ್ಯುಮೆಂಟ್ ತೋರಿಸಿದ್ರು. ಅವರ ಮಗ ಪೇಪರ್ ರೂಪದಲ್ಲಿ ಡಾಕ್ಯುಮೆಂಟ್ ತೋರಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಪವರ್ ಕಟ್, ಬಿಜೆಪಿ ಸರ್ಕಾರ ಬಂದ ಮೇಲೆ 24 ಗಂಟೆ ಕರೆಂಟ್. ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಪ್ಯಾನಿಕ್ ಮಾಡುವ ಯತ್ನ ನಡೆಸಿತ್ತು. ಸಿದ್ದರಾಮಯ್ಯ ಕೊಡುಗೆ ಅಂದ್ರೆ 1,600 ಪಿಎಫ್ಐ ಕಾರ್ಯಕರ್ತರ ಕೇಸ್ ವಾಪಸ್ ಪಡೆದಿದ್ದು, ಬಿಜೆಪಿ ಸರ್ಕಾರ ಇದೀಗ ಪಿಎಫ್ಐ ಅನ್ನು ಬ್ಯಾನ್ ಮಾಡಿದೆ. ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ದೂರಿದರು.
ಕಾಂಗ್ರೆಸ್ಗೆ ಸೇರ್ಪಡೆಯಾದ ಸಿ.ಟಿ.ರವಿ ಆಪ್ತರಾಗಿದ್ದ ಎಚ್.ಡಿ.ತಮ್ಮಯ್ಯ ಸಂಕಲ್ಪ ಬೈಕ್ ರ‍್ಯಾಲಿ ಆಯೋಜನೆ ಮಾಡಿದ್ದು, ಚಿಕ್ಕಮಗಳೂರು ನಗರದ ಕರ್ತಿಕೆರೆಯಿಂದ ಕಾಂಗ್ರೆಸ್ ಕಚೇರಿವರೆಗೆ ರ‍್ಯಾಲಿ ನಡೆಸಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಒಂದೆಡೆ ತಮ್ಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ನಿಂದ ಸಂಕಲ್ಪ ರ‍್ಯಾಲಿ ನಡೆದರೆ, ಮತ್ತೊಂದೆಡೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗಾಗಿ ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ ಆಯೋಜನೆಯಾಗಿತ್ತು. ಸಿ.ಟಿ.ರವಿ ವಿರುದ್ಧ ಬದಲಾವಣೆ ಸಂಕಲ್ಪ ಎಂದು ತಮ್ಮಯ್ಯ ವಾರ್ ಆರಂಭ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ: ಕಾಂಗ್ರೆಸ್ ಕಡೆ ಮುಖ ಮಾಡಿದ ಸಿ ಟಿ ರವಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ ತಮ್ಮಯ್ಯ