ಚಿಕ್ಕಮಗಳೂರು: ಕೋವಿಡ್-19 ಸೋಂಕು ತಡೆಗಟ್ಟಲು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರ ವಹಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ಕೊಪ್ಪ ತಾಲೂಕು ಪಂಚಾಯಿತಿಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ ಕುರಿತು ತಾಲೂಕಿನಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಹಾಗೂ ಶಾಂತಿ ಸುವ್ಯವಸ್ಥೆ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಕೋವಿಡ್-19 ಸೋಂಕು ವಿಶ್ವವ್ಯಾಪಿ ಹರಡಿದ್ದು ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ ಸೋಂಕು ನಿಯಂತ್ರಿಸಲು ಶ್ರಮಿಸಬೇಕು ಎಂದರು.
ಕಾಫಿ ತೋಟಗಳಲ್ಲಿನ ಕೂಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ ಆದರೆ, ಬೇರೆ ಹಳ್ಳಿ ಅಥವಾ ನಗರಗಳಿಗೆ ಇವರು ಹೋಗದಂತೆ ಎಚ್ಚರವಹಿಸಬೇಕು. ತಾಲೂಕಿನಲ್ಲಿ ಯಾವುದೇ ಸಭೆ, ಸಮಾರಂಭ ನಡೆಯದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸಾಮಾಜಿಕ ಸೇವೆ ಒದಗಿಸಲು ಎನ್,ಎಸ್,ಎಸ್., ಎನ್,ಸಿ,ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕ ದಳದ ಸ್ವಯಂ ಸೇವಕರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದರು.
ಹೋಟೆಲ್, ಹೋಮ್ ಸ್ಟೆ, ರೆಸ್ಟೋರೆಂಟ್‌ಗಳನ್ನು ನಿಷೇಧಿಸಿದ್ದು ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಉದ್ಯೋಗ ಅರಸಿ ಬಂದ ಯುವಕರಿಗೆ ಅಗತ್ಯವಿದ್ದಲ್ಲಿ ಆಯ್ದ ಹೋಟೆಲ್‌ಗೆ ವಿನಾಯಿತಿ ನೀಡಿ ಊಟವನ್ನು ಮನೆಗೆ ಪಾರ್ಸಲ್ ಕೊಂಡೊಯ್ಯಲು ಅವಕಾಶ ಕಲ್ಪಿಸಿ. ಜೊತೆಗೆ ಅಕ್ರಮ ಮದ್ಯಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದೂ ಹೇಳಿದರು.
ಶೃಂಗೇರಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಷನ್ ವಾರ್ಡ್‌ಗಳನ್ನು ವೀಕ್ಷಿಸಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.