ಚಿಕ್ಕಮಗಳೂರು: ಛತ್ತೀಸಘಡ ದಿಂದ ಕಾಫಿ ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆ ತಂದು ಸರಿಯಾದ ಕೂಲಿ ಹಾಗೂ ಆಹಾರದ ಜೊತೆ ಮೂಲಭೂತ ಸೌಲಭ್ಯವನ್ನೂ ನೀಡದೆ ಬಿಲ್ಡಿಂಗ್ ಕಟ್ಟಲು ಜೀತದಾಳುಗಳಂತೆ ಕೆಲಸ ಮಾಡಿಸುತ್ತಿದ್ದ ಕಂಟ್ರಾಕ್ಟರ್ ವಿರುದ್ಧ ದೂರು ದಾಖಲಿಸಿ, 26 ಕೂಲಿ ಕಾರ್ಮಿಕರನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಈ ಪದ್ದತಿ ಬೆಳಕಿಗೆ ಬಂದಿದ್ದು, ದಿನಕ್ಕೆ 200 ರೂಪಾಯಿ ಕೂಲಿ ನೀಡುತ್ತಿದ್ದ ಕಂಟ್ರಾಕ್ಟರ್ ಚಂದ್ರು, ಹೊಟ್ಟೆ ತುಂಬಾ ಊಟವನ್ನೂ ನೀಡದೆ ಬಿಲ್ಡಿಂಗ್ ಕಾಮಗಾರಿ ಕೆಲಸಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದನು. ಮಹಿಳೆಯರು, ಪುರುಷರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 26 ಜನರನ್ನ ತರೀಕೆರೆ ತಹಸೀಲ್ದಾರ್ ಧರ್ಮೋಜಿರಾವ್, ಹಾಗೂ ಉಪವಿಭಾಗಧಿಕಾರಿ ರೂಪ ದಾಳಿ ಮಾಡಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗೆ ತರೀಕೆರೆಯ ಅಕ್ಕನಾಗಲಾಂಬಿಕೆ ಗದ್ದುಗೆ ಬಳಿ ನಡೆಯುತ್ತಿದ್ದ ಕಾಮಗಾರಿ ಜಾಗಕ್ಕೆ ದಾಳಿ ಮಾಡಿದ ಅಧಿಕಾರಿಗಳು ಎಲ್ಲರನ್ನೂ ರಕ್ಷಿಸಿ ಕಂಟ್ರಾಕ್ಟರ್ ಚಂದ್ರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದು ಜೀತ ಪದ್ದತಿಯಿಂದಾ ಕಾರ್ಮಿಕರನ್ನು ಹೊರತಂದಿದ್ದು, ಅವರಿಗೂ ಸ್ವಾತಂತ್ರ್ಯ ನೀಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.