ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆಗೆ ಶಿವಾಲಯವೂ ನಿರ್ಮಾಣವಾಗಲಿ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಮಠದ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ರಂಭಾಪುರಿ ಪೀಠದಲ್ಲಿ ವಿಶ್ವ ಹಿಂದೂ ಪರಿಷತ್ ಸದಸ್ಯರಿಗೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನಿಧಿಯ ಚೆಕ್ ಹಸ್ತಾಂತರಿಸಿದ ಬಳಿಕ ರಂಭಾಪುರಿ ಶ್ರೀ ಮಾತನಾಡಿದರು. ರಾಮ ಮಂದಿರ ಆವರಣದಲ್ಲಿ ಶ್ರೀ ರಾಮ ಪೂಜಿಸಿದ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವಾಲಯ ನಿಮಾರ್ಣ ಮಾಡಬೇಕು. ಈ ಹಿಂದೆ ಅಯೋಧ್ಯೆಯ ಶ್ರೀರಾಮ ಮಂದಿರದ ಆವರಣದಲ್ಲಿ ಶ್ರೀರಾಮ ಪೂಜಿಸಿದ ಶಿವಲಿಂಗವೂ ಸಹ ದೊರೆತಿರುವುದು ಐತಿಹಾಸಿಕ ಮತ್ತು ಪೌರಾಣಿಕ ಘಟನೆಗೆ ಒತ್ತು ನೀಡಿದೆ. ಜಗತ್ತಿನಲ್ಲಿ ಶಿವನೇ ಸರ್ವಸ್ವ. ಶಿವನಿಲ್ಲದೇ ಜಗತ್ತಿಲ್ಲ.
ಜಗತ್ತಿನ ಬಹುಸಂಖ್ಯಾತ ಜನರು ಶಿವನ ಆರಾಧಕರಾಗಿದ್ದಾರೆ. ಎಲ್ಲ ಜೀವ ಜಂತುಗಳಿಗೂ ಶಿವನೇ ಮೂಲವಾಗಿದ್ದಾನೆ. ಶ್ರೀ ರಾಮನೂ ಸಹ ರಾಮಾಯಣ ಕಾಲದಲ್ಲಿ ಇದನ್ನು ಅರಿತು ಶಿವನನ್ನು ಆರಾಧಿಸಿ, ಪೂಜಿಸಿ ಒಲಿಸಿಕೊಂಡ ವ್ಯಕ್ತಿಯಾಗಿದ್ದಾನೆ. ಶಿವ ಜಗತ್ತಿನ ಎಲ್ಲಾ ಜೀವಿಗಳ ಆತ್ಮವಾಗಿದ್ದಾನೆ. ಈ ಹಿನ್ನೆಲೆ ರಾಮ ಮಂದಿರದ ಆವರಣದಲ್ಲಿ ಶಿವಾಲಯವೂ ನಿರ್ಮಾಣವಾಗಲಿ ಎಂದು ಹೇಳಿದರು.
ಇದನ್ನೂ ಓದಿ: ಹಬ್ಬಕ್ಕೊಂದು ಸಿಎಂ ಬದಲಿಸಿದ್ದರೆ 25 ಸಿಎಂ ಬದಲಾಗಬೇಕಿತ್ತು: ಯತ್ನಾಳ್ಗೆ ಈಶ್ವರಪ್ಪ ಟಾಂಗ್