ಚಿಕ್ಕಮಗಳೂರು: ಮುಂಗಾರು ಮಳೆ ಅಬ್ಬರಿಸಿದ ಪರಿಣಾಮ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಉತ್ತಮ ಬೆಳೆ ಬೆಳೆದಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಆದರೆ, ಅನ್ನದಾತನಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ.
ಆಗಾಗ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕೆರೆಗಳು ಗರಿಷ್ಠ ಮಟ್ಟದಲ್ಲಿ ತುಂಬುತ್ತಿವೆ. ಇತ್ತ ಮಳೆಯಿಂದಾಗಿ ಬೆಳೆಯೂ ಉತ್ತಮವಾಗಿ ಬೆಳೆದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಹೆಸರು, ಶೇಂಗಾ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಬೆಳೆಗಳು ಉಲುಸಾಗಿ ಬೆಳೆದಿದ್ದು, ರೈತ ಈ ವರ್ಷ ಲಾಭದ ನಿರೀಕ್ಷೆಯಲ್ಲಿದ್ದಾನೆ.
ಜಿಲ್ಲೆಯ ಕೆಲವೆಡೆ ಹಲವು ಬೆಳೆಗಳು ಕಟಾವಿಗೆ ಬಂದಿದೆ. ಆದರೆ, ಜಮೀನುಗಳ ಮಾಲೀಕರಿಗೆ ಕೂಲಿ ಕಾರ್ಮಿಕರ ಉದ್ಭವಿಸಿದೆ. ಕೆಲವರು ಕೊರೊನಾ ಕಾರಣ ಎಲ್ಲೂ ಕೆಲಸಕ್ಕೆ ಹೋಗುತ್ತಿಲ್ಲ ಎನ್ನಲಾಗಿದೆ. ಇನ್ನು ಕೆಲವರನ್ನು ಕೆಲಸಕ್ಕೆ ಯಾರೂ ಕರೆಯುತ್ತಿಲ್ಲವಂತೆ.
ಕಾಫಿನಾಡಲ್ಲಿ 1,29,080 ಕೃಷಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, 1,18,001 (ಶೇ.91.4) ಬಿತ್ತನೆ ಮಾಡಲಾಗಿದ್ದು, ಕಳೆದ ವರ್ಷ ಇದೇ ವೇಳೆಗೆ ಶೇ.68.6ರಷ್ಟು ಬಿತ್ತನೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮವಾಗಿಯೇ ಬಿತ್ತನೆ ಕಾರ್ಯ ನಡೆದಿದೆ.
ತಾಲೂಕುವಾರು ಅಂಕಿ-ಅಂಶ ಹೀಗಿದೆ.
ತಾಲೂಕು | ಹೆಕ್ಟೇರ್ ಪ್ರದೇಶ (ಗುರಿ) | ಬಿತ್ತನೆ ಮಾಡಿರುವುದು | ಶೇಕಡವಾರು (%) |
ಚಿಕ್ಕಮಗಳೂರು | 16,730 | 16,123 | 96.3 |
ಮೂಡಿಗೆರೆ | 4,000 | 3,850 | 96.3 |
ಕೊಪ್ಪ | 2,800 | 2,300 | 82.1 |
ಶೃಂಗೇರಿ | 2,000 | 1,650 | 82.5 |
ಎನ್.ಆರ್.ಪುರ | 3,100 | 3,020 | 97.4 |
ತರೀಕೆರೆ | 32,800 | 27,467 | 83.7 |
ಕಡೂರು | 67,650 | 63,591 | 94 |
ಒಟ್ಟು | 1,29,080 | 1,18,001 | 91.4 |
ಮಳೆಯನ್ನು ಆಶ್ರಯಿಸಿ ಎಳ್ಳು, ಆಲೂಗೆಡ್ಡೆ ಮತ್ತು ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಕೊರೊನಾ ಕಾರಣ ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಆಲೂಗಡ್ಡೆಗೆ ಉತ್ತಮ ಬೆಲೆಯಿದೆ. ಆದರೆ ಇಳುವರಿಯಿಲ್ಲ. ಊರಿನವರೇ ಕೆಲಸಕ್ಕೆ ಸಿಕ್ಕರೆ ಖುಷಿಯಾಗುತ್ತದೆ. ಆದರೆ, ಹೊರಗಡೆಯಿಂದ ಬಂದವರಿಗೆ ಸಂಬಳ ನೀಡುವುದಕ್ಕೆ ಆಗುವುದಿಲ್ಲ. ಅವರು ಬರುವ ಮತ್ತು ಹೋಗುವುದಕ್ಕೆ ವಾಹನಕ್ಕೆ ವ್ಯವಸ್ಥೆ ಮಾಡಬೇಕು. ಕೊರೊನಾ ಬಂದಾಗ ನಮ್ಮ ಬೆಳೆಗಳನ್ನು ಭೂಮಿಯಲ್ಲಿಯೇ ಬಿಡುವಂತಾಗಿದೆ. ಹಾಗೂ ಹಳ್ಳಿ ಜನರೇ ಕೆಲಸಕ್ಕೆ ಬರಲು ಹೆದರುವಂತಾಗಿದೆ ಎಂದು ಜಮೀನು ಮಾಲೀಕರು ನೋವು ತೋಡಿಕೊಂಡರು.
ಕೃಷಿ ಕೂಲಿ ಕೆಲಸಕ್ಕಾಗಿ ಹೋಗುವ ಕಾರ್ಮಿಕರು ಸಹ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಭೂಮಿಯ ಒಡೆಯರಿಗೂ ಸಮಸ್ಯೆಯಿದೆ. ನಮಗೂ ಸಮಸ್ಯೆಯಿದೆ. ಕೊರೊನಾ ಬಂದಿರುವ ಕಾರಣ ಸರಿಯಾಗಿ ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಒಂದು ದಿನ ಕೆಲಸ ಸಿಕ್ಕರೇ ಇನ್ನು ನಾಲ್ಕು ದಿನಗಳು ಖಾಲಿ ಇರುತ್ತೇವೆ. ಮೊದಲು ದಿನಕ್ಕೆ ಗಂಡಸರಿಗೆ ₹500, 250 ಮಹಿಳೆಯರಿಗೆ ಸಂಬಳ ನೀಡುತ್ತಿದ್ದರು ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಆದರೆ, ಈಗ ಶೇ.50ರಷ್ಟು ನೀಡುವ ಕೂಲಿ ಕಡಿಮೆಯಾಗಿದೆ. ಇದರಿಂದ ಜೀವನ ಮಾಡುವುದಕ್ಕೇ ಕಷ್ಟಕರವಾಗಿದ್ದು, ಸರ್ಕಾರ ನಮ್ಮ ಬಗ್ಗೆ ಯೋಚಿಸಬೇಕು. ಈ ಬಾರಿಯ ಮುಂಗಾರು ಮಳೆ ರೈತರಲ್ಲಿ ಸಂತಸವನ್ನೂ ಮೂಡಿಸಿದ್ದು, ಕೃಷಿ ಕೂಲಿ ಕಾರ್ಮಿಕರ ಜೀವನವನ್ನು ಬೀದಿಗೆ ತಂದು ಬಿಟ್ಟಿದೆ.