ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ನಿರ್ವಹಣಾ ಕಾರ್ಯಗಳಿಗಾಗಿ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ. ಕೊರೊನಾ ವೈರಸ್ ಬಂದ ಮೇಲೆ ನಗರಗಳಲ್ಲಿ, ಡಿಜಿಟಲ್ ವ್ಯವಹಾರ ಮತ್ತು ಆನ್‌ಲೈನ್ ತರಗತಿಗಳಿಗಾಗಿ ನಗರವಾಸಿಗಳಿಗೆ ನಿರಂತರ ವಿದ್ಯುತ್ ಅಗತ್ಯವಾಗಿದೆ. ಆದರೂ ವಿದ್ಯುತ್ ಕಡಿತದ ಸಮಸ್ಯೆ ನಿವಾರಣೆಯಾಗಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮೆಸ್ಕಾಂನ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ್ ಮಾತನಾಡಿ, ನಮ್ಮ ವ್ಯಾಪ್ತಿ ಚಿಕ್ಕಮಗಳೂರು ನಗರಕ್ಕೆ ಸೀಮಿತಾಗಿದ್ದು, ನಗರದಲ್ಲಿ ಯಾವುದೇ ರೀತಿಯ ಅನಿಯಮಿತ ವಿದ್ಯುತ್ ನಿಲುಗಡೆ ಮಾಡುತ್ತಿಲ್ಲ. ವಿದ್ಯುತ್ ನಿಲುಗಡೆ ಮಾಡುವ ಸಂದರ್ಭ ಬಂದರೆ ಅದರ ಕುರಿತಾ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತದೆ ಎಂದರು.
ಒಂದು ಗಂಟೆಗಿಂತ ಹೆಚ್ಚು ತುರ್ತು ನಿರ್ವಹಣೆ ಕೆಲಸದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಊರ್ಜ ಮಿತ್ರ ಆ್ಯಪ್ ಮೂಲಕ ಆ ಪ್ರದೇಶದ ಜನರಿಗೆ ಮಾಹಿತಿ ನೀಡಲಾಗುತ್ತದೆ. ದಿನದ 24ಗಂಟೆಯೂ ಸೇವೆ ನೀಡುತ್ತೇವೆ. ಕೊರೊನಾ ಸಂದರ್ಭದಲ್ಲೂ 24 ಗಂಟೆ ವಿದ್ಯುತ್ ನೀಡಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.