ಚಿಕ್ಕಮಗಳೂರು : ರಾಜ್ಯ ಸರ್ಕಾರ ನೀಡುವ ಕ್ರೀಡಾರತ್ನ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಸ್ತಿಪಟು ಎಚ್.ಎಸ್ ಅನುಶ್ರೀ ಭಾಜನರಾಗಿದ್ದು, ನಾಳೆ ಬೆಂಗಳೂರಿನ ವಿಧಾನಸೌಧದ ಬಾಂಕ್ವೇಟ್‌ಹಾಲ್‌ನಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೊಪ್ಪ ತಾಲ್ಲೂಕಿನ ಬೆಳವಿನಕೊಡಿಗೆ ಗ್ರಾಮ ಹೊಸಳ್ಳಿಯ ಶ್ರೀನಿವಾಸ್ ಮತ್ತು ಸುಲೋಚನಾ ದಂಪತಿಗಳ ಪುತ್ರಿಯಾಗಿರುವ ಅನುಶ್ರೀ ಕುಸ್ತಿಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. ಅನುಶ್ರೀ ಅವಳಿ ಸಹೋದರಿ ಎಚ್.ಎಸ್ ಆತ್ಮಶ್ರೀ ಕೂಡ ಮಹಿಳಾ ಕುಸ್ತಿಯಲ್ಲಿ ರಾಷ್ಟ್ರಮಟ್ಟದ ಅನೇಕ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಕಳೆದ 4 ವರ್ಷದ ಹಿಂದೆ ರಾಜ್ಯ ಸರ್ಕಾರ ಅವರಿಗೂ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಸಹೋದರ ಅಭಿಷೇಕ್ ಹೊಸಳ್ಳಿ ಸಹ ಕಬಡ್ಡಿಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದು ಇಡೀ ಕುಟುಂಬವೇ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.