ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಹಾಗೂ ಮೂಲರಹಳ್ಳಿಯಲ್ಲಿ ಕಾಡಾನೆ ಹಾವಳಿ ಹಾಗೂ ಕಾಡುಕೋಣಗಳ ಹಾವಳಿಯಿಂದ ಜನರು ಬೇಸತ್ತಿರುವ ಬೆನ್ನಲ್ಲೇ ಈಗ ರಾತ್ರಿ ವೇಳೆ ಕಾಳಿಂಗ ಸರ್ಪಗಳ ಹಾವಳಿ ಪ್ರಾರಂಭವಾಗಿದೆ.
ಗುತ್ತಿಹಳ್ಳಿಯ ಮಂಜುನಾಥ ಏಂಬುವರ ಕಾಫಿ ತೋಟದಿಂದ ಬರೋಬ್ಬರಿ 16 ಅಡಿ ಉದ್ದದ ಕಾಳಿಂಗ ಸರ್ಪ ರಸ್ತೆಗೆ ಇಳಿದಿದ್ದು, ರಸ್ತೆ ದಾಟುತ್ತಿದ್ದಿದ್ದು ಕಂಡು ಬಂದಿದೆ. ಕಾಳಿಂಗ ಸರ್ಪದ ಗಾತ್ರ ಹಾಗೂ ಉದ್ದವನ್ನು ನೋಡಿ ಕಾರಿನಲ್ಲಿ ಹೋಗುತ್ತಿದ್ದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಪದೇ ಪದೇ ಈ ಭಾಗದಲ್ಲಿ ಕಾಡಾನೆಗಳು, ಕಾಡೆಮ್ಮೆ ಹಾಗೂ ಈಗ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರು ಆತಂಕದಿಂದಲೇ ರಸ್ತೆಯಲ್ಲಿ ಸಂಚಾರ ಮಾಡುವಂತಾಗಿದೆ.