ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡೆ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳು 10ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿದ್ದು, ಚಿಕ್ಕಮಗಳೂರಿನ ಗಾಯತ್ರಿ ಶಾಂತೇಗೌಡ ಅವರ ನಿವಾಸ, ಕಚೇರಿ, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆ ಹಾಗೂ ಚಿಕ್ಕಮಗಳೂರಿನ ಮರ್ಲೆ ಕಲ್ಲಿನ ಕ್ರಷರ್ ಮೇಲೂ ದಾಳಿ ನಡೆದಿದೆ. ಮನೆಗೆ ಉಪಹಾರ ತರಿಸಿಕೊಂಡಿರುವ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಅಲ್ಲದೆ, ಹಾಸನದ ಬೇಲೂರಿನಲ್ಲಿರುವ ಗಾಯತ್ರಿ ಅವರ ಅಳಿಯನ ನಿವಾಸದಲ್ಲಿ ಕೂಡ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಗಾಯತ್ರಿ ಶಾಂತೇಗೌಡರ ನಿವಾಸ ಮೇಲೆ ಕೂಡ ದಾಳಿ ನಡೆದಿದೆ.
ತಿರುಪತಿಗೆ ತೆರಳಿರುವ ಗಾಯತ್ರಿ ಶಾಂತೇಗೌಡ: ಐಟಿ ದಾಳಿ ನಡೆದಿರುವ ಈ ಸಂದರ್ಭದಲ್ಲಿ ಗಾಯತ್ರಿ ಶಾಂತೇಗೌಡ ದಂಪತಿ ಮನೆಯಲ್ಲಿಲ್ಲ. ಅವರು ತಿರುಪತಿ ಯಾತ್ರೆಯಲ್ಲಿದ್ದು, ಮೂರು ದಿನಗಳ ಹಿಂದೆ ದೇವರ ದರ್ಶನಕ್ಕೆ ತೆರಳಿದ್ದಾರೆ. ಚಿಕ್ಕಮಗಳೂರಿನ ನಿವಾಸದಲ್ಲಿ ಗಾಯತ್ರಿ ಅವರ ಮಗಳು ಮಾತ್ರ ಇದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಐಟಿ ದಾಳಿ ವಿಚಾರ ತಿಳಿದು ಗಾಯತ್ರಿ ಶಾಂತೇಗೌಡ ಅವರ ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಸಿ.ಟಿ. ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೂಟಿ ರವಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಿಜೆಪಿ ಸರ್ಕಾರ ಐಟಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಸದ್ಯ ಗಾಯತ್ರಿ ಶಾಂತೇಗೌಡ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅಲ್ಲದೆ, ಐಟಿ ದಾಳಿ ಖಂಡಿಸಿ ನಗರದ ಎಂಜಿ ರಸ್ತೆಯಲ್ಲಿ ಸಹ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಐಟಿ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೊದಲು ಸಿ.ಟಿ ರವಿ ಮನೆ ಮೇಲೆ ದಾಳಿ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ರವಿ ಅವರು ತಾಕತ್ತಿದ್ದರೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಸೋಲಿನ ಭೀತಿಯಿಂದ ಐಟಿ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ