ಚಿಕ್ಕಮಗಳೂರು: ಅನರ್ಹ ಕ್ಷೇತ್ರಗಳಿಂದ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಯಾರು ಬರ್ತಾರೆ ಅನ್ನೋದನ್ನು ನಿಮಗೆ ಹೇಳಲ್ಲ ಎಂದರು.
ಇನ್ನು ಸದನ 15 ದಿನ ನಡೆಯಬೇಕು ಅಂತ ನಿಯಮಾವಳಿ ಇದೆ. ಆದರೆ ಬಿಜೆಪಿ ಸರ್ಕಾರ ಯಾವುದೇ ನಿಯಮಾವಳಿಗೂ ಗೌರವ ಕೊಡುತ್ತಿಲ್ಲ. ನಿಯಮಾವಳಿ ನಾವೇ ಮಾಡಿಕೊಂಡಿರೋದು, ಅದು ದೇವಲೋಕದಿಂದ ಬಂದಿಲ್ಲ. ಸಂವಿಧಾನ ನಾವೇ ರಚನೆ ಮಾಡಿರೋದು, ಆದರೆ ಇವೆಲ್ಲದ್ದಕ್ಕೂ ಬಿಜೆಪಿಯ ವಿರೋಧವಿದೆ ಎಂದು ಆರೋಪಿಸಿದರು.
ನಮ್ಮ ಕಾಲದಲ್ಲಿ 15 ದಿನ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಆದರೆ ಬಿಜೆಪಿ ಮೂರೇ ದಿನಕ್ಕೆ ಸೀಮಿತಗೊಳಿಸಿದೆ. ಕರ್ನಾಟಕ ಸದನದ ಇತಿಹಾಸದಲ್ಲಿಯೇ ಇಷ್ಟೇ ಮಾತನಾಡಬೇಕು, ಇಷ್ಟೇ ಸಮಯ ಮಾತನಾಡಬೇಕು ಎಂದೂ ಹೇಳುತ್ತಿದ್ದಾರೆ. ಹಿಂದೆ ಯಾವತ್ತೂ ಈ ರೀತಿ ಆಗಿರಲಿಲ್ಲ. ನಾನು ಎಲ್ಲ ಹುದ್ದೆ ಅಲಂಕರಿಸಿದ್ದೇನೆ. ನಾನು ಯಾವತ್ತೂ ಪ್ರತಿಪಕ್ಷದವರಿಗೆ ನಿಮ್ಮ ಮಾತು ನಿಲ್ಲಿಸಿ ಎಂದೂ ಹೇಳಿರಲಿಲ್ಲ. ಅವರ ಮಾನಸಿಕ ಸ್ಥಿತಿ ಆ ರೀತಿ ಇದೆ ಎಂದು ಆಕ್ರೋಶ ತೋರಿಸಿದ್ರು.
ಸರ್ಕಾರದ ಹುಳುಕು ಹಾಗೂ ವೈಫಲ್ಯ ಗೊತ್ತಾಗುತ್ತದೆ ಎಂದು ಮಾಧ್ಯಮಗಳನ್ನೂ ಸದನದಿಂದ ದೂರ ಇಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.