ಚಿಕ್ಕಮಗಳೂರು: ಶೋಲಾ ಅರಣ್ಯದ ಮಧ್ಯೆ ಹರಿದು ಬರುವ ಹೊನ್ನಮ್ಮನ ಹಳ್ಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾಫಿ ಕಣಿವೆ ಚಿಕ್ಕಮಗಳೂರಂದ್ರೆ ಪ್ರವಾಸಿಗರ ಪಾಲಿನ ಸ್ವರ್ಗ. ಇಲ್ಲಿನ ಅದೆಷ್ಟೋ ಸುಂದರ ತಾಣಗಳಿಗೆ ಪ್ರವಾಸಿಗರು ಮಾರುಹೋಗಿದ್ದಾರೆ. ಕಾಫಿನಾಡಿನ ಸೌಂದರ್ಯಕ್ಕೆ ರಾಜ್ಯ-ಹೊರ ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ಕೊಟ್ಟು ಕಾಫಿ ತೋಟದೊಳಗಿನ ಪ್ರಕೃತಿ ಸೌಂದರ್ಯ ಸವಿಯುತ್ತಾರೆ.
ಕಾಫಿನಾಡಿನ ಗಿರಿ ಶಿಖರಗಳ ದಾರಿ ಹಿಡಿದಾಗ ಪ್ರವಾಸಿಗರಿಗೆ ಎದುರಾಗೋದು ಹೊನ್ನಮ್ಮನ ಹಳ್ಳ ಪಾಲ್ಸ್. ಗಿಡ ಮೂಲಿಕೆಯ ಸತ್ವವುಳ್ಳ ಈ ನೀರು ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಅಂತಾರೆ ಇಲ್ಲಿಗೆ ಬರುವ ಪ್ರವಾಸಿಗರು. ಈ ಕುರಿತ ವಿಶೇಷ ವರದಿ ಇಲ್ಲಿದೆ.
ಹೌದು.. ಜುಳು ಜುಳು ಹರಿಯೋ ಗಂಗೆ.. ಐಸ್ ವಾಟರ್ನಂತೆ ತಣ್ಣಗೆ ಕೊರೆಯೋ ನೀರು. ಹಾಲ್ನೊರೆಯಂತೆ ಉಕ್ಕುವ ಹೊಳೆಯೋ ಇಲ್ಲಿನ ನೀರಿನ ಗುಣಕ್ಕೆ ಟೂರಿಸ್ಟ್ಗಳು ಇನ್ನಷ್ಟು ಫಿದಾ ಆಗ್ತಾರೆ. ಶೋಲಾ ಅರಣ್ಯದೊಳಗೆ ವರ್ಷದ 365 ದಿನವೂ ಹರಿಯೋ ನೀರು, ದಾರಿಹೋಕರಿಗೆ ಅಲ್ಲಲ್ಲೇ ಖುಷಿ ನೀಡ್ತಾ ಮುಂದಿನ ಹಾದಿ ತೋರಿಸುತ್ತೆ..
ಚಿಕ್ಕಮಗಳೂರಿನಿಂದ ದತ್ತ ಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗೋ ಈ ಹೊನ್ನಮ್ಮನ ಹಳ್ಳದ ಜಲಪಾತ ಇಲ್ಲಿಗೆ ಬರೋ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಹೊನ್ನಮ್ಮನ ಹಳ್ಳ ಜಲಪಾತಕ್ಕೆ ಭೇಟಿ ನೀಡ್ದೆ ಮುಂದೆ ಸಾಗೋಲ್ಲ. ಮಳೆಗಾಲದಲ್ಲಿ ಕಾಫಿನಾಡಿಗೆ ಬಂದ್ರೆ ಸ್ವರ್ಗ ನೋಡಿದಷ್ಟು ಖುಷಿಯಾಗುತ್ತೆ ಅನ್ನುತ್ತಾರೆ ಪ್ರವಾಸಿಗರು.
ಚಿಕ್ಕಮಗಳೂರು ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿ ಈ ಹೊನ್ನಮ್ಮನ ಹಳ್ಳ ಇದ್ದು, ದತ್ತ ಪೀಠದ ಮಾರ್ಗ ಮಧ್ಯೆ ಈ ಸ್ಥಳ ಎದುರಾಗುತ್ತದೆ. ನಗರದಿಂದ ಸರ್ಕಾರಿ ಬಸ್ ಹಾಗೂ ಖಾಸಗೀ ಬಸ್ ವ್ಯವಸ್ಥೆ ಕೂಡ ಈ ಜಾಗಕ್ಕೆ ಇದೆ. ಸ್ವಂತ ವಾಹನ ಹಾಗೂ ಬಾಡಿಗೆ ವಾಹನದಲ್ಲಿಯೂ ಈ ಸ್ಥಳಕ್ಕೆ ಪ್ರವಾಸಿಗರು ತೆರಳಬಹುದಾಗಿದೆ.
ಆದರೇ ಈ ಪ್ರದೇಶದ ಸುತ್ತಮುತ್ತ ಸಣ್ಣ ಪುಟ್ಟ ರೀತಿಯ ಹೋಟೇಲ್ ವ್ಯವಸ್ಥೆ ಇದೆ. ಈ ಹೊನ್ನಮ್ಮನ ಹಳ್ಳದ ಫಾಲ್ಸ್ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಈ ಫಾಲ್ಸ್ ನೋಡುತ್ತಿದ್ದಂತೆ ಮನಸ್ಸಿನಲ್ಲಿರುವ ಒತ್ತಡ ಪ್ರಯಾಣದ ಆಯಾಸ ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ. ಈ ಫಾಲ್ಸ್ ಸೌಂದರ್ಯ ಸವಿಯಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಾರೆ.
ಒಟ್ಟಾರೆ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಕಳೆದ 15 ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಪ್ರತಿಯೊಂದು ಜಲಪಾತಗಳು ತುಂಬಿ ಹರಿಯುತ್ತಿದ್ದು, ಹೊನ್ನಮ್ಮನ ಹಳ್ಳವು ಕೂಡ ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತಿದೆ. ಆದರೆ ಈ ರಸ್ತೆಗೆ ಹೋಗುವ ಮಧ್ಯೆ ಮೂರು ನಾಲ್ಕು ಭಾಗದಲ್ಲಿ ಭೂ ಕುಸಿತ, ಗುಡ್ಡ ಕುಸಿತ, ಆಗಿರುವ ಕಾರಣ ಇನ್ನು ಮೂರು ದಿನಗಳ ಕಾಲ ಈ ಸ್ಥಳಕ್ಕೆ ಹೋಗಲು ಪ್ರವಾಸಿಗರಿಗೆ ನಿಷೇಧವನ್ನು ಜಿಲ್ಲಾಡಳಿತ ವಿಧಿಸಿದೆ. ಮೂರು ದಿನದ ನಂತರ ಪ್ರತಿಯೊಬ್ಬರು ಈ ಸ್ಥಳಕ್ಕೆ ಭೇಟಿ ನೀಡಿ, ಈ ಜಲಪಾತದ ಸೌಂದರ್ಯ ಸವಿಯಬಹುದು.
ಇದನ್ನೂ ಓದಿ:Video of Elephants: ಬೆಳ್ಳಂಬೆಳಗ್ಗೆ ಶ್ರೀ ಹೊಳೆಆಂಜನೇಯ ಸ್ವಾಮಿ ದರ್ಶನ ಪಡೆದ ಗಜಪಡೆ