ಚಿಕ್ಕಮಗಳೂರು: ಅಂತೂ ಇಂತು 2021ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ ಕಲರ್ ಫುಲ್ ಆಗಿ ಸೆಲಬ್ರೆಟ್ ಮಾಡ್ಬೇಕು, 2022 ಅನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು ಅಂತ ಎಲ್ಲರೂ ಕಾತರದಿಂದಿದ್ದಾರೆ.
ಪ್ರವಾಸಿಗರ ಸ್ವರ್ಗ ಅಂತಾನೇ ಕರೆಯಿಸಿಕೊಳ್ಳುವ ಕಾಫಿನಾಡು ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿದೆ. ಆದರೆ, ಈ ಮಧ್ಯೆ ರಾಜ್ಯ ಸರ್ಕಾರ ಹೊರಡಿಸಿರುವ 50:50 ಆದೇಶ ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದ್ದು, ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ತಲೆನೋವು ತರಿಸಿದೆ.
ಹೌದು, ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2021ಕ್ಕೆ ಟಾಟಾ ಹೇಳಿ, 22ಕ್ಕೆ ವೆಲ್‍ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೇವರೇಟ್ ಸ್ಪಾಟ್ಗಳಿಗೆ ಹೋಗಿ ಸೆಟಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಾಫಿನಾಡು ಚಿಕ್ಕಮಗಳೂರಂತೂ ಫುಲ್ ಹೌಸ್ಫುಲ್. ಎಲ್ಲಿ ನೋಡಿದ್ರು ಪ್ರವಾಸಿಗರ ದಂಡು. ಇಯರ್ ಎಂಡ್ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಯಲ್ಲಿ ಪ್ರತಿದಿನ ಜನಸಾಗರವೇ ಸೇರುತ್ತಿದೆ.
ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಫುಲ್ಬುಕ್ ಆಗಿವೆ. ಬಹುತೇಕರು ಇಯರ್ ಎಂಡ್, ನ್ಯೂ ಇಯರ್ಗೆ ಬುಕ್ ಮಾಡಿಸಿದ್ದಾರೆ. ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. 10-15 ದಿನಗಳ ಹಿಂದೆಯೇ ಬುಕ್ಕಿಂಗ್ ಮಾಡಿಸಿಕೊಂಡಿರುವ ಮಾಲೀಕರಿಗೆ ಈಗ ಪೀಕಲಾಟ ಶುರುವಾಗಿದೆ. ಸರ್ಕಾರ 50:50 ಆದೇಶ ಮಾಡಿರೋದು ಈಗಾಗಲೇ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದ ಮಾಲೀಕರಿಗೆ ನಾಲಿಗೆ ಮೇಲೆ ಬಿಸಿ ತುಪ್ಪವಿಟ್ಟಂತಾಗಿದೆ. ಆದ್ರೆ, ಸರ್ಕಾರದ ಆದೇಶವನ್ನ ಪಾಲಿಸಲೇಬೇಕು ಅಂತಾರೆ ಡಿಸಿ ರಮೇಶ್.
ಒಂದೆಡೆ ಪ್ರವಾಸಿಗರು ಮುಳ್ಳಯ್ಯನಗಿರಿ ಸೌಂದರ್ಯ ಸವಿಯುತ್ತಿದ್ರೆ, ಮತ್ತೊಂದೆಡೆ ಟೂರಿಸ್ಟ್ಗಳ ಬೇಜವಾಬ್ದಾರಿ ಕೂಡ ಎದ್ದು ಕಾಣ್ತಿದೆ. ಸಾಗರೋಪಾದಿಯಲ್ಲಿ ಮುಳ್ಳಯ್ಯನಗಿರಿಯತ್ತ ಬರ್ತಿರೋ ಪ್ರವಾಸಿಗರ ಬೇಕಾಬಿಟ್ಟಿ ವರ್ತನೆ ಕೂಡ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ದೂರದ ಮಾತು. ಸ್ಯಾನಿಟೈಸರ್ ಕೇಳೋದೆ ಬೇಡ.
ರಾಜ್ಯದ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರು ಜಿಲ್ಲೆಯ ನಾನಾ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಈಗಾಗಲೇ ಸರ್ಕಾರ ಒಮಿಕ್ರಾನ್ ತಡೆಗೆ ಮೇಲಿಂದ ಮೇಲೆ ಸಭೆ ಮಾಡಿ ಟಫ್ ರೂಲ್ಸ್ನತ್ತ ಮುಖ ಮಾಡ್ತಿದೆ. ಆದ್ರೆ, ಕೆಲ ಪ್ರವಾಸಿಗರು ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸ್ತಾ ಇರೋದು ಸ್ಥಳೀಯ ಜನರ ಬೇಸರಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ, ಕಳೆದೆರಡು ವರ್ಷಗಳಿಂದ ಕೊರೊನಾ, ಲಾಕ್ಡೌನ್ ಅಂತ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರು ಇದೀಗ ಸರ್ಕಾರದ ಆದೇಶಕ್ಕೆ ಕಂಗಾಲಾಗಿದ್ದಾರೆ. ಆದರೂ, ಸರ್ಕಾರ ಜಾರಿ ಮಾಡಿರೋ ಆದೇಶವನ್ನ ನಾವು ಪಾಲಿಸಬೇಕು. ನಾವು ಪಾಲಿಸ್ತೀವಿ. ಹೆಚ್ಚು ಜನರನ್ನ ಸೇರಲು ಬಿಡಲ್ಲ ಅಂತ ಜಿಲ್ಲಾಡಳಿತ ಹೇಳ್ತಿದೆ. ಈ ಮಧ್ಯೆ ಪ್ರವಾಸಿಗರ ಹಾಟ್ಸ್ಪಾಟ್ ಅಂತಾನೇ ಕರೆಸಿಕೊಳ್ಳೋ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಹರಿದು ಬರ್ತಿದ್ದು, ಜಿಲ್ಲಾಡಳಿತ ಎಲ್ಲವನ್ನೂ ಹೇಗೆ ಬ್ಯಾಲೆನ್ಸ್ ಮಾಡುತ್ತೆ ಎಂಬುದನ್ನು ಕಾದುನೋಡಬೇಕು.
ಓದಿ: ವಿದ್ಯೆ ಒಳ್ಳೆಯದಕ್ಕೆ ಬಳಸದೇ, ಹಣಕ್ಕಾಗಿ ಬಳಸುತ್ತಿರುವುದು ದುರಂತ: ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ವಿಷಾದ