ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ.
ಕುಸಿದ ಮೇಲ್ಚಾವಣಿ:
ನಗರದಲ್ಲಿ ಮಳೆ ಮುಂದುವರೆದಿದ್ದು, ಏಕಾಏಕಿ ಮನೆ ಕುಸಿದು ಬಿದ್ದಿರುವ ಘಟನೆ ಅರವಿಂದ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಒಂದು ವರ್ಷದ ಮಗು ಪ್ರಾಣಪಾಯದಿಂದ ಪಾರಾಗಿದೆ. ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದು ಮನೆಯೊಳಗೆ ಮಣ್ಣು ಬಿದ್ದಿದೆ. ಪರಿಣಾಮ ಒಳಗಿದ್ದ ವಸ್ತುಗಳು ನಾಶವಾಗಿದೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದ ಹಿನ್ನಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಕ್ಕಿ ಹರಿಯುತ್ತಿರುವ ತುಂಗೆ :
ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ತುಂಗಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ದಿನದಿಂದ ದಿನಕ್ಕೆ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್, ಯಾತ್ರಿ ನಿವಾಸಕ್ಕೂ ನೀರು ನುಗ್ಗಿದೆ. ಅಲ್ಲದೇ ಶೃಂಗೇರಿಯ ಕಿಗ್ಗಾ, ಹಾಗೂ ಎಸ್.ಕೆ ಬಾರ್ಡರ್, ಕೆರೆ ಕಟ್ಟೆಯಲ್ಲಿ ಭಾರೀ ಮಳೆಯಾಗುತ್ತಿದೆ.
ಗುಡ್ಡ ಕುಸಿತ:
ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣಗಳಾದ ದತ್ತಪೀಠ, ಮುಳ್ಳಯ್ಯನ ಗಿರಿಯ ಮಾರ್ಗದಲ್ಲಿ ಗುಡ್ಡ ಕುಸಿದಿದ್ದು, ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಮುಳ್ಳಯ್ಯನ ಗಿರಿ, ಹೊನ್ನಮ್ಮ ಫಾಲ್ಸ್, ದತ್ತಪೀಠಕ್ಕೆ ಪ್ರವಾಸಿಗರು ಬಾರದಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಮನವಿ ಮಾಡಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.