ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ, ಘಟ್ಟ ಪ್ರದೇಶ ಹಾಗೂ ದಟ್ಟ ಕಾನನದ ನಡುವೆ ಕಳೆದ ರಾತ್ರಿಯಿಂದಲೂ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಳೆಯಿಂದ ನದಿಗಳ ಹರಿವಿನ ಪ್ರಮಾಣ ಅಪಾಯದ ಮಟ್ಟ ಮೀರಿವೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶೃಂಗೇರಿ, ಕೊಪ್ಪ, ಕಳಸ, ಬಾಳೆಹೊನ್ನೂರು, ಎನ್ ಆರ್ ಪುರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಮನೆಯಿಂದ ಹೊರ ಬರಲು ಜನರು ಪರದಾಡುತ್ತಿದ್ದಾರೆ.
ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಕೊಂಡಿದೆ. ಇನ್ನು ಕೆಲವೆಡೆ ರಸ್ತೆ ಸಂಚಾರದಲ್ಲಿಯೂ ಅಡಚಣೆ ಉಂಟಾಗಿದೆ.