ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಖೋಟಾ ನೋಟುಗಳ ಹಾವಳಿ ಜೋರಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಮಚೀಂದ್ರ ಮಾಹಿತಿ ನೀಡಿದ್ದಾರೆ.
ರೆಡ್ ಮರ್ಕ್ಯುರಿ ಖರೀದಿಸೋಕೆ ಹೊರಡುತ್ತಿದ್ದರಂತೆ..!
ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ನಾಸಿರ್, ಸಂತೋಷ್ ಎಂಬ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ರೆಡ್ ಮರ್ಕ್ಯುರಿ ಖರೀದಿಸಲು ಖೋಟಾ ನೋಟು ತೆಗೆದುಕೊಂಡು ಹೋಗುತ್ತಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಮತ್ತೋರ್ವ ಆರೋಪಿ ಜುಬೇದ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬ್ಯುಸಿನೆಸ್ ಕೈಕೊಟ್ಟಿದ್ದಕ್ಕೆ ನೋಟು ಪ್ರಿಂಟ್..!
ವ್ಯಾಪಾರ ಕೈಕೊಟ್ಟ ಕಾರಣದಿಂದ ತನ್ನ ತಂದೆಯ ಜೊತೆ ಮೆಣಸು, ಏಲಕ್ಕಿ, ಕಾಫಿ ವ್ಯಾಪಾರ ಮಾಡುತ್ತಿದ್ದ ಪ್ರಮೋದ್ ಹಾಗೂ ತರಕಾರಿ ವ್ಯಾಪಾರ ಮಾಡುತ್ತಿದ್ದ ಶಕೀಲ್ ಎಂಬುವರು ಗರಿ ಗರಿ ನೋಟುಗಳನ್ನು ಪ್ರಿಂಟ್ ಮಾಡಲು ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾರೆ.
ಇದಕ್ಕಾಗಿ ಅವರು ಕಲರ್ ಪ್ರಿಂಟರ್ ಅನ್ನು ಬಳಸುತ್ತಿದ್ದು, 2,000 ಸಾವಿರ ರೂಪಾಯಿಗಳನ್ನು ಮಾಮೂಲಿ ಹಾಳೆಯ ಮೇಲೆ ಮುದ್ರಿಸಿ ಚಲಾವಣೆಗೆ ಮುಂದಾಗಿದ್ದರು ಎಂದು ಎಸ್ಪಿ ಅಕ್ಷಯ್ ಮಚೀಂದ್ರ ಮಾಹಿತಿ ನೀಡಿದ್ದಾರೆ.