ಚಿಕ್ಕಮಗಳೂರು: ತುಮಕೂರು ಜಿಲ್ಲೆಯಲ್ಲಿ ರೈತ ಮಹಿಳೆ ಸಿದ್ದಮ್ಮ ಅವರ ಅಡಿಕೆ ತೋಟವನ್ನು ಅಧಿಕಾರಿಗಳು ಕಡಿಸಿದ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ತೋಟದಲ್ಲಿ ಹೂವು ಬಿಟ್ಟಿದ್ದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ನೆಲಕ್ಕೆ ಉರುಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2 ಎಕರೆ ಕಾಫಿ ತೋಟದಲ್ಲಿ ಹೂ ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕಡಿದಿದ್ದಾರೆ ಎನ್ನಲಾಗ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಒತ್ತುವರಿ ಆರೋಪ ಹಿನ್ನೆಲೆ ಹೂವು ಬಿಟ್ಟಿದ್ದ ಕಾಫಿ ತೋಟಕ್ಕೆ ಕೊಡಲಿ ಏಟು ನೀಡಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ದಿಢೀರ್ ನಿರ್ಧಾರಕ್ಕೆ ರೈತ ದಿನೇಶ್ ಹೆಬ್ಬಾರ್ ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ದೇವಗೋಡು ಗ್ರಾಮದ ಸರ್ವೆ ನಂ. 78 ರಲ್ಲಿ ಇರುವ ಎರಡು ಎಕರೆ ತೋಟದಲ್ಲಿ ಅರಣ್ಯ ಅಧಿಕಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.