ಚಿಕ್ಕಮಗಳೂರು: ಭೂ ಖರೀದಿ ವಿಚಾರದಲ್ಲಿ ಅಸಮಾಧಾನಗೊಂಡು ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿರುವ ಘಟನೆ ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಹೆಡದಾಳು ಗ್ರಾಮದ ಮಂಜುನಾಥ್ ಗೌಡ ಎಂಬುವವರ ಮನೆಯ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದೇ ಗ್ರಾಮದ ಕಿರಣ್ ಹಾಗೂ ಚೇತನ್ ಕುಮಾರ್ ನಡುವೆ ಭೂ ಖರೀದಿ ವಿಚಾರದಲ್ಲಿ ಅಸಮಾಧಾನವಾಗಿ ನಂತರ ಜಗಳ ಮಾಡಿಕೊಂಡಿದ್ದರು. ಇದರಿಂದ ಇಬ್ಬರ ನಡುವೆ ವೈಮನಸ್ಸು ಕೂಡ ಬೆಳೆದಿತ್ತು. ಇದರ ಜೊತೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕ್ರಿಕೆಟ್ ಆಡುವಾಗ ಕಿರಣ್ ಹಾಗೂ ಚೇತನ್ ನಡುವೆ ಜಗಳವಾಗಿತ್ತು ಎನ್ನಲಾಗಿದೆ.

ಇದರಿಂದ ಕೋಪಗೊಂಡ ಕಿರಣ್ ಹಾಗೂ ಆತನ ಸಂಬಂಧಿ ಸೇರಿ ಸಿಂಗಲ್ ಬ್ಯಾರಲ್ ಗನ್ ತೆಗೆದುಕೊಂಡು ಬಂದು ಚೇತನ್ ಮನೆಯ ಮೇಲೆ ದಾಳಿ ಮಾಡಿದ್ದಾನೆ. ಹಾಗೆಯೇ ಮನೆಯ ಮುಂದೆ ನಿಂತಿದ್ದ ಕಾರಿನ ಮೇಲೂ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪಿಎಸ್ಐ ನಂದಿನಿ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಓದಿ: ಯಾವುದೇ ಒತ್ತಡದಿಂದ ಸಿಂಧೂರಿ ವರ್ಗಾವಣೆಯಾಗಿಲ್ಲ: ಸಚಿವ ಸೋಮಶೇಖರ್ ಸ್ಪಷ್ಟನೆ