ಚಿಕ್ಕಮಗಳೂರು : ರೈತರಿಗೆ ಮರಣ ಶಾಸನಗಳಾಗಿರುವ ಕೃಷಿ ಕಾಯ್ದೆಗಳನ್ನ ವಾಪಸ್ ಆಗ್ರಹಿಸಿ ಕಡೂರು ತಾಲೂಕಿನಲ್ಲಿ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ವೈ ಎಸ್ ವಿ ದತ್ತಾ, ಹಿಂದೆ ರೈತರು ಗುಡುಗಿದ್ರೆ ಸರ್ಕಾರ ನಡುಗುತ್ತಿದ್ದ ಕಾಲ ಈಗಿಲ್ಲ. ರೈತರ ಪರ ಯಾರಿಗೂ ಅನುಕಂಪ-ಅಭಿಮಾನವಿಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತ ವಿರೋಧಿ ಕಾಯ್ದೆ ವಿರೋಧಿಸಿ ಕಡೂರು ತಾಲೂಕಿನ 9 ಮೈಲಿಕಲ್ಲಿನಲ್ಲಿ ಪ್ರತಿಭಟನೆ ನಡೆಸಿದ್ದು, ರೈತರನ್ನು ಅಸ್ತಿಪಂಜರವನ್ನಾಗಿಸಿ, ಕಾರ್ಪೊರೇಟ್ ಸಂಸ್ಕೃತಿಗೆ ಎಲ್ಲ ನೀಡುವುದೇ ಈ ಕಾಯ್ದೆಗಳ ಸಾಧನೆ.
ಎಪಿಎಂಸಿ ಕಣ್ಮುಚ್ಚುತ್ತದೆ. ಮುಂದೆ ರೈತರಿಗೆ ಬೆಂಬಲ ಬೆಲೆ ತಪ್ಪಿಹೋಗುತ್ತದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಮುಚ್ಚಿಹೋಗುತ್ತವೆ. ಬಂಡವಾಳಶಾಹಿಗಳ ಕಪಿಮುಷ್ಟಿಗೆ ರೈತರು ಸಿಲುಕುತ್ತಾರೆ. ನೂರಾರು ಎಕರೆ ಇದ್ದ ರೈತರು ಕೂಲಿ ಕಾರ್ಮಿಕರಾಗುತ್ತಾರೆ. ಭೂ ರಹಿತರ ಪಾಡೇನೆಂಬುದು ಊಹಿಸಲೂ ಆಗದು ಎಂದು ಆತಂಕ ವ್ಯಕ್ತಪಡಿಸಿದರು.
ಭೂ ಸುಧಾರಣಾ ಕಾಯ್ದೆಯ ಉದ್ದೇಶ ರೈತರನ್ನು ಉದ್ದರಿಸುವುದಕ್ಕಲ್ಲ, ನಿಧಾನಗತಿಯಲ್ಲಿ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುವ ಉದ್ದೇಶ ಈ ಕಾಯ್ದೆಯದ್ದಾಗಿದೆ. ರೈತರ ಪಾಲಿನ ಈ ಮರಣ ಶಾಸನ ರದ್ದಾಗಲೇಬೇಕು. ರೈತರ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ. ಈ ವಿಚಾರ ತಾರ್ಕಿಕ ಅಂತ್ಯ ಕಂಡು ಅವರ ಬದುಕು ಹಸನಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಇವತ್ತಿನದು ಕೇವಲ ರೈತರ ಬಂದ್ ಅಲ್ಲ, ಅವರನ್ನು ದಿಕ್ಕು ತಪ್ಪಿಸುವಂತ ರಾಜಕೀಯ ಬಂದ್ : ಕರಂದ್ಲಾಜೆ
ರೈತ ವಿರೋಧಿಗಳಿಗೆ ಅಸ್ತ್ರಕೊಟ್ಟು ಮೈ ಗುದ್ದಿಸಿಕೊಂಡಂತಹ ಪರಿಸ್ಥಿತಿ ರೈತರದ್ದಾಗಿದೆ. ನಮ್ಮ ಗೋಳನ್ನು ಕೇಳುವವರು ಯಾರೂ ಇಲ್ಲ. ಆಳುವವರಿಗೆ ರೈತರ ನೋವು ಗೊತ್ತಿಲ್ಲ ಎಂದು ಕೆಲ ರೈತರು ಇದೇ ಸಂದರ್ಭದಲ್ಲಿ ಕಿಡಿಕಾರಿದರು. ನಂತರ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಎಪಿಎಂಸಿ ಕಾಯ್ದೆಯ ಗೆಜೆಟ್ ನೋಟಿಫಿಕೇಷನ್ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.