ಚಿಕ್ಕಮಗಳೂರು: ಪತ್ನಿಗೆ ಮೆಸೇಜ್ ಮಾಡಿದ ಮೊದಲ ಗಂಡನನ್ನು ಎರಡನೇ ಗಂಡ ಸಿನಿಮಾ ರೀತಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿ ಮಾರ್ಗ ಮಧ್ಯೆ ಗಾಡಿ ಕೆಟ್ಟ ಪರಿಣಾಮ ಪೊಲೀಸರಿಗೆ ಲಾಕ್ ಆದ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕಳೆದ ಐದು ವರ್ಷಗಳ ಹಿಂದೆ ಕಡೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ ಕುಠಾಣಿ ಮೂಲದ ಮಂಜುಳಾರನ್ನು ಮೋಹನ್ ರಾಮ್ ಎಂಬಾತ ಕಳೆದ ವರ್ಷ ಜೋಧ್‍ಪುರ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು.
ಮದುವೆ ಬಳಿಕ ಮೋಹನ್ ರಾಮ್ ತನ್ನ ಪತ್ನಿಯನ್ನು ಕಡೂರಿಗೆ ಕರೆದುಕೊಂಡು ಬಂದು ಸಂಸಾರ ನಡೆಸುತ್ತಿದ್ದನು. ಕಡೂರಿಗೆ ಬಂದ 2 ತಿಂಗಳ ನಂತರ ರಾಜಸ್ಥಾನಕ್ಕೆ ಹೋಗಿದ್ದ ಹೆಂಡತಿಯನ್ನು ಕಡೂರಿಗೆ ಕರೆದುಕೊಂಡು ಬರಲು ಹೋಗಿದ್ದ ಪತಿ ಮೋಹನ್ ರಾಮ್ ಜೊತೆ ಮಂಜುಳಾ ಬರಲಿಲ್ಲ. ಕಡೂರಿಗೆ ಬರಲು ಆಕೆ ಒಪ್ಪದ ಹಿನ್ನೆಲೆ ಬೇಸತ್ತು ಮೋಹನ್ ಸುಮ್ಮನಾಗಿದ್ದನು.
ಹೆಂಡತಿ ಮೇಲಿನ ಪ್ರೀತಿಯಿಂದ ಮೋಹನ್ ಆಗಾಗ್ಗೆ ಅವಳ ಮೊಬೈಲ್‍ಗೆ ಮೆಸೇಜ್ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ, ಕಳೆದ ತಿಂಗಳು ಮತ್ತೆ ಆಕೆಯನ್ನ ಮಾತನಾಡಿಸಿ, ಬುದ್ಧಿ ಹೇಳಿ ಕರೆದುಕೊಂಡು ಬರಲು ಹೋಗಿದ್ದ ಮೋಹನ್‍ಗೆ ಆಕೆ ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂ ಪ್ರಕಾಶ್ ಜೊತೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.
ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂ ಪ್ರಕಾಶ್ ಮೊದಲ ಪತಿ ಮೋಹನ್ ನನ್ನ ಮುಗಿಸಲು ಸಂಚು ರೂಪಿಸಿದ್ದ. ಏಳು ಜನರ ತಂಡದೊಂದಿಗೆ ಆ.28 ರ ಭಾನುವಾರ ರಾತ್ರಿ ಕಡೂರಿಗೆ ಬಂದ ಓಂ ಪ್ರಕಾಶ್ ಸಿಪಿಸಿ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿದ್ದ ಮೋಹನ್ ರಾಮ್‍ನನ್ನು ಸಿನಿಮಿಯ ಶೈಲಿಯಲ್ಲಿ ಅಪಹರಿಸಿ ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿ, ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದಾನೆ.
ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಕಡೂರು ಪೊಲೀಸರು ಹಂತಕರ ಕಾರನ್ನು ಚೇಸ್ ಮಾಡಿಕೊಂಡು ಹೋಗುವಾಗ ಕಡೂರು ತಾಲೂಕಿನ ಮತಿಘಟ್ಟ ಬಳಿ ಹಂತಕರ ಕಾರು ಕೈಕೊಟ್ಟ ಪರಿಣಾಮ ಎಂಟು ಜನ ಹಂತಕರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾವಿನ ದವಡೆಯಲ್ಲಿದ್ದ ಮೋಹನ್ ರಾಮ್ ಅದೃಷ್ಟವಶಾತ್ ಪಾರಾಗಿದ್ದಾರೆ.
ಸಿನಿಮಿಯ ರೀತಿಯಲ್ಲಿ ಗಾಡಿಯನ್ನು ಚೇಸ್ ಮಾಡಿದ ಪೊಲೀಸರು ಬೆಂಗಳೂರು ಮೂಲದ ಆರೋಪಿ 2 ನೇ ಪತಿ ಓಂ ಪ್ರಕಾಶ್, ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬ ಆರೋಪಿಗಳ ಜೊತೆ ಕೊಲೆ ಮಾಡಲು ಬಳಸಿದ್ದ ವಿಕೆಟ್ ಹಾಗೂ ಕಾರನ್ನು ವಶಕ್ಕೆ ಪಡೆದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ: ಇಲ್ಲಿದೆ ಸಂಪೂರ್ಣ ಕ್ರೈಂ ರೆಕಾರ್ಡ್